







ಕೊಕ್ಕಡ : ಸ್ಕೂಟಿಗೆ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಸವಾರೆಯ ಕಾಲು ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಪಟ್ಟೂರು ಸಮೀಪದ ಅಡ್ಡೈ ಸೇತುವೆ ಬಳಿ ಜು. 17 ರ ಸಂಜೆ ಸಂಭವಿಸಿದೆ.
ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಮಂಡೂರುಪಳಿಕೆ ಸಮೀಪದ ಸಿಬಂತಿ ಚಂದ್ರ ಎಂಬವರ ಮಗಳು ಪ್ರಣಮ್ಯ (19) ಎಂದು ಗುರುತಿಸಲಾಗಿದೆ. ಪಟ್ರಮೆ ಕಡೆಯಿಂದ ಉಪ್ಪಾರಪಳಿಕೆ ಕಡೆಗೆ ಹೋಗುತ್ತಿದ್ದ ಸ್ಕೂಟಿಗೆ ವಿರುದ್ಧ ದಿಕ್ಕಿನಿಂದ ಬಂದ ನೆಲ್ಯಾಡಿಯ ಖಾಸಗಿ ಶಾಲೆಗೆ ಸೇರಿದ ಬಸ್ಸು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರಣಮ್ಯ ಬಸ್ಸಿನ ಚಕ್ರದ ಅಡಿಗೆ ಸಿಲುಕಿ ರಕ್ಷಣೆಗಾಗಿ ಕೂಗಾಡುತ್ತಿದ್ದಳು.


ಅಪಘಾತ ಸಂಭವಿಸಿದ ಸಂಧರ್ಭ ಅದೇ ಮಾರ್ಗವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ವಾಹನದ ಚಾಲಕ ಜಯರಾಮ ಗೌಡ ತಕ್ಷಣ ತಮ್ಮ ಬಸ್ಸನ್ನು ನಿಲ್ಲಿಸಿ ಗಾಯಾಳುವಿನ ರಕ್ಷಣೆಗೆ ಮುಂದಾಗಿದ್ದಾರೆ.
ಅಲ್ಲದೆ ಶ್ರೀರಾಮ ವಿದ್ಯಾಸಂಸ್ಥೆಯ ಬಸ್ಸಿನಲ್ಲಿದ್ದ ಶಿಕ್ಷಕಿಯರಾದ ಶೃತಿ, ಸಂಧ್ಯಾ ಪಿ. ಕೆ., ಮಲ್ಲಿಕಾ ಎಸ್., ಸೌಮ್ಯಶ್ರೀ ಕೆ. ಆರ್., ಧನ್ಯಶ್ರೀ, ದಿವ್ಯ ಹಾಗೂ ಅದೇ ಶಾಲೆಯ ಶಿಕ್ಷಕಿ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರತಿನಿಧಿ ಸ್ವಾತಿ ಕೆ.ವಿ. ಸೇರಿ ಬಸ್ಸಿನಡಿಗೆ ಸಿಲುಕಿದ್ದ ಪ್ರಣಮ್ಯಳನ್ನು ಮೇಲೆತ್ತಿದ್ದಾರೆ. ಬಳಿಕ ಸ್ಥಳೀಯರಾದ ಕಮಲಾಕ್ಷ ಹಾಗೂ ರಾಮಚಂದ್ರ ಭಟ್ ರವರ ಕಾರಿನಲ್ಲಿ ಗಾಯಾಳುವನ್ನು ಕೊಕ್ಕಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದಾರೆ.
ಈ ಸಂದರ್ಭ ಹಿಂದೂ ಕಾರ್ಯಕರ್ತ ಸಂತೋಷ್ , ಶ್ರೀರಾಮ ವಿದ್ಯಾಸಂಸ್ಥೆಯ ಗುಮಾಸ್ತ ದೇವಿ ಪ್ರಸಾದ್ ಶೆಟ್ಟಿ ಜೊತೆಗಿದ್ದು ಸಹಕರಿಸಿದರು. ಗಾಯಾಳುವಿಗೆ ಮಂಗಳೂರು ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ ಇರಿಸಲಾಗಿದೆ.









