






ಉಜಿರೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಿದ್ದರೂ, ಸಂಸ್ಕಾರ ಪಡೆಯುವ ಅವಕಾಶಗಳು ಕಡಿಮೆಯಾಗಿವೆ. ವಿದ್ಯಾರ್ಥಿಗಳು ಬಾಹ್ಯ ಜ್ಞಾನದೊಂದಿಗೆ ಆಂತರಿಕವಾಗಿ ಬೆಳೆಯುವ ಅವಶ್ಯಕತೆಯಿದೆ ಎಂದು ಮಂಗಳೂರಿನ ಎಸ್.ಡಿ.ಎಮ್. ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾನುಪ್ರಕಾಶ್ ಬಿ.ಇ ಅಭಿಪ್ರಾಯಪಟ್ಟರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಮ್) ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪ್ರತಿಕ್ರಿಯೆಗಿಂತ ಪ್ರತಿಸ್ಪಂದಿಸುವ ಮನೋಭಾವನೆ ನಮ್ಮದಾಗಬೇಕು. ಶ್ರೀ ಸಿದ್ಧವನ, ರತ್ನ ಮಾನಸ ಮತ್ತು ಎಸ್.ಡಿ.ಎಮ್ ವಸತಿ ಪದವಿ ಪೂರ್ವ ಕಾಲೇಜುಗಳಂತಹ ಸಂಸ್ಥೆಗಳಲ್ಲಿ ಸಿಗುವಂತಹ ಸಂಸ್ಕಾರದ ಪಾಠ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಡಿಗ್ರಿಗಳು ಮತ್ತು ಪ್ರಮಾಣಪತ್ರಗಳು ವೃತ್ತಿ ಕೌಶಲ್ಯವನ್ನು ತೋರಿಸಬಹುದು, ಆದರೆ ವೃತ್ತಿಜೀವನದಲ್ಲಿ ಯಶಸ್ಸಿಗೆ ನಮ್ಮ ಕ್ರಿಯಾಶೀಲತೆಯೇ ಮುಖ್ಯ,” ಎಂದು ತಿಳಿಸಿದರು.
ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಸ್ವಯಂ ಶಿಸ್ತು ಅತ್ಯಗತ್ಯ. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಕ್ರಿಯಾಶೀಲತೆ ಮತ್ತು ಪ್ರತಿಭೆಯನ್ನು ಒರೆಗೆ ಹಚ್ಚಬೇಕು ಎಂದು ಅವರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಉಪಸ್ಥಿತರಿದ್ದರು.ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ವಾಣಿ ಎಂ.ಎ. ಪ್ರಸ್ತಾವನೆಗೈದು ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕ ಪಾರ್ಶ್ವನಾಥ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಭಾರತಿ ವಂದನಾರ್ಪಣೆ ಸಲ್ಲಿಸಿದರು.









