​ಮಧ್ಯಾಹ್ನ ಬಿಸಿಯೂಟ: ಮೊಟ್ಟೆಯ ದರ ಪರಿಷ್ಕರಣೆಗೆ ಮುಖ್ಯ ಶಿಕ್ಷಕರ ಸಂಘದ ಆಗ್ರಹ

0

​ಬೆಳ್ತಂಗಡಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುವ ಪೂರಕ ಪೌಷ್ಟಿಕ ಆಹಾರವಾದ ಮೊಟ್ಟೆಯ ದರ ಏರಿಕೆಯಾಗಿದ್ದು, ಪರಿಷ್ಕೃತ ದರ ನಿಗದಿಪಡಿಸುವಂತೆ ಆಗ್ರಹಿಸಿ ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘವು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

​ಶಿಕ್ಷಕರ ಜೇಬಿಗೆ ಹೊರೆ:ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಪೂರಕ ಪೌಷ್ಟಿಕ ಆಹಾರವಾಗಿ ಪ್ರತಿದಿನ ಮೊಟ್ಟೆ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ಸರ್ಕಾರವು ಪ್ರತಿ ಮೊಟ್ಟೆಗೆ 5.20 ರೂಪಾಯಿ ದರ ನಿಗದಿಪಡಿಸಿತ್ತು. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯು 7.50 ರೂ.ನಿಂದ 8.00 ರೂ.ವರೆಗೆ ಏರಿಕೆಯಾಗಿದೆ.

ಇದರಿಂದಾಗಿ ಪ್ರತಿ ಮೊಟ್ಟೆಗೆ ಶಿಕ್ಷಕರು ಸ್ವಂತ ಹಣದಿಂದ ಸುಮಾರು 2.30 ರೂ.ನಿಂದ 2.80 ರೂ.ವರೆಗೆ ಹೆಚ್ಚುವರಿ ವೆಚ್ಚ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.​

ವರ್ಷಕ್ಕೆ ಲಕ್ಷಾಂತರ ರೂ. ನಷ್ಟ:ಈ ಬೆಲೆ ಏರಿಕೆಯಿಂದಾಗಿ ಒಬ್ಬ ಮುಖ್ಯ ಶಿಕ್ಷಕರು ವರ್ಷಕ್ಕೆ ಸುಮಾರು 50,000 ರೂ.ನಿಂದ 70,000 ರೂ.ವರೆಗೆ ಹೆಚ್ಚುವರಿ ಹಣವನ್ನು ಮಾರಾಟಗಾರರಿಗೆ ಪಾವತಿಸಬೇಕಾಗಿದೆ. ಈ ಆರ್ಥಿಕ ಹೊರೆಯು ಶಿಕ್ಷಕರನ್ನು ಕಂಗೆಡಿಸಿದೆ.

ಈಗಾಗಲೇ ಈ ವಿಷಯವನ್ನು ಹಲವು ಬಾರಿ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದರೂ, ಇದುವರೆಗೆ ದರ ಪರಿಷ್ಕರಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಂಘವು ಆರೋಪಿಸಿದೆ.​

ಅಧಿಕಾರಿಗಳಿಗೆ ಮನವಿ:ಈ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವಂತೆ ಒತ್ತಾಯಿಸಿ, ಜುಲೈ 07, 2026ರಂದು ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಹಾಯಕ ನಿರ್ದೇಶಕರು (ಪಿಎಂ ಪೋಷಣ್ ಶಕ್ತಿ ನಿರ್ಮಾಣ್), ಬೆಳ್ತಂಗಡಿ ಅವರ ಮೂಲಕ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕೂಡಲೇ ಮೊಟ್ಟೆಯ ದರವನ್ನು ಪರಿಷ್ಕರಿಸಿ, ಶಿಕ್ಷಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಸಂಘವು ಸರ್ಕಾರವನ್ನು ಆಗ್ರಹಿಸಿದೆ.

LEAVE A REPLY

Please enter your comment!
Please enter your name here