






ಧರ್ಮಸ್ಥಳ: ಕಳೆದ ಹಲವು ವರ್ಷಗಳಿಂದ ಹದಗೆಟ್ಟಿರುವ ಅಜಿಕುರಿ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಜು.07 ರಂದು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ “ರಸ್ತೆ ಇಲ್ಲದಿದ್ದರೆ ಮತವೂ ಇಲ್ಲ” ಎಂಬ ಘೋಷಣೆ ಮೊಳಗಿಸಿ, ರಸ್ತೆ ದುರಸ್ತಿಯಾಗದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅಜಿಕುರಿ ಮುಖ್ಯರಸ್ತೆ ಕಳೆದ ಐದಾರು ವರ್ಷಗಳಿಂದ ಹಳ್ಳ-ಗುಂಡಿಮಯವಾಗಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. 2010ರಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ಈ ರಸ್ತೆ ಇದೀಗ ಸಂಪೂರ್ಣ ಹಾಳಾಗಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ಕಳೆದ ವರ್ಷವೂ ಬಾಳೆ ಗಿಡ ನೆಟ್ಟು ಗ್ರಾಮಸ್ಥರು ಪ್ರತಿಭಟನೆ ಕೈಗೊಂಡಿದ್ದರು.



ಪ್ರತಿಭಟನಾ ಸ್ಥಳಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ಪಿಡಿಒ ಗಾಯತ್ರಿ ಭೇಟಿ ನೀಡಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ರಸ್ತೆಯ ಬದಿಯ ಕಣಿಗಳನ್ನು ತೆರವುಗೊಳಿಸಿ, ಚರಳು ಕಲ್ಲು ಹಾಕುವ ತಾತ್ಕಾಲಿಕ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಬಳಿಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಅವರನ್ನು ರಸ್ತೆ ಉದ್ದಕ್ಕೂ ಕರೆದುಕೊಂಡು ಹೋಗಿ ಹಳ್ಳ-ಗುಂಡಿಗಳನ್ನು ತೋರಿಸಿದರು.
ನಾಳೆಯೇ ಜೆಸಿಬಿ ಯಂತ್ರವನ್ನು ತರಿಸಿ ಕಣಿಗಳನ್ನು ತೆರವುಗೊಳಿಸಿ, ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆಯನ್ನು ಹಿಂಪಡೆದರು. ಆದರೆ, ನೀಡಿದ ಭರವಸೆಯಂತೆ ಶೀಘ್ರದಲ್ಲೇ ಕಾಮಗಾರಿ ಆರಂಭವಾಗದಿದ್ದರೆ ಮತಬಹಿಷ್ಕಾರ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು









