






ಬೆಳ್ತಂಗಡಿ: ಯುವಜನತೆ ಸಹಕಾರಿ ರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ, ಆ ಕ್ಷೇತ್ರದಲ್ಲಿ ಬೆಳೆಯಬೇಕಿದೆ. ಇಂತಹ ಪ್ರೇರಣೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ, ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ನಡೆದ ಎನ್.ಎಸ್. ಗೋಖಲೆ ಸಂಸ್ಮರಣಾ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಿ ಕ್ಷೇತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎನ್.ಎಸ್. ಗೋಖಲೆಯವರಂತಹ ಹಿರಿಯರ ಮಾರ್ಗದರ್ಶನ ಇಂದು ಲಕ್ಷಾಂತರ ಮಂದಿಗೆ ದಾರಿದೀಪವಾಗಿದೆ. ದೇಶದಲ್ಲಿ ಇಂದು ಸುಮಾರು 8.50 ಲಕ್ಷ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 30 ಕೋಟಿಗೂ ಅಧಿಕ ಮಂದಿ ಸದಸ್ಯರಾಗಿರುವುದು ಸಹಕಾರಿ ರಂಗದ ಬಲವನ್ನು ತೋರಿಸುತ್ತದೆ. ಈ ಸಂಸ್ಥೆಗಳು ಸದೃಢವಾಗಿದ್ದರಿಂದಲೇ ಇಂದು ಅನೇಕರು ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಅವರು ಬಣ್ಣಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ಪ್ರಕಾಶ ನಾರಾಯಣ ಮಾತನಾಡಿ, “ಶಿಕ್ಷಣವು ಪೋಷಕರಿಗೆ ಆರ್ಥಿಕ ಹೊರೆಯಾಗಬಾರದು ಎಂಬ ದೃಷ್ಟಿಯಿಂದ, ಸಂಘದ ಸದಸ್ಯರ ಮಕ್ಕಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತಿದೆ” ಎಂದು ತಿಳಿಸಿದರು.ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಗೋಖಲೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಕೃಷಿ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಎನ್.ಆರ್., ಡಿಜಿಎಂ ಗೋವಿಂದ ಭಟ್, ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಎಸ್.ವಿ. ಹಿರೇಮಠ, ಸಂಘದ ನಿರ್ದೇಶಕರುಗಳು ಮತ್ತು ವೃತ್ತಿಪರ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ರಾಘವ ಗೌಡ ಕೆ. ಸ್ವಾಗತಿಸಿದರು. ನಿರ್ದೇಶಕ ಚೆನ್ನಕೇಶವ ನಾಯ್ಕ ಮತ್ತು ಸಿಇಒ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸುಷ್ಮಾ ಹಾಗೂ ಅಶ್ವಿನ್ ನವಾಥೆ ವಿದ್ಯಾರ್ಥಿಗಳ ಪರಿಚಯ ಮಾಡಿಕೊಟ್ಟರು.









