ಬೆಳ್ತಂಗಡಿ: ನಾಲ್ಕು ದಶಕ ಕಳೆದರೂ ಅಭಿವೃದ್ಧಿ ಕಾಣದ ರಸ್ತೆ; ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ

0

​ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಅಂಚೆಯ ನಾವರ ಗ್ರಾಮದ ದೇರಂಡೋಡಿ, ರಾಜಪಾದೆ ಮತ್ತು ದೇವರಗುಡ್ಡೆ ಸಂಪರ್ಕಿಸುವ ಸುಮಾರು 3 ಕಿ.ಮೀ. ರಸ್ತೆಯು ಕಳೆದ 44 ವರ್ಷಗಳಿಂದ ದುಸ್ಥಿತಿಯಲ್ಲಿದ್ದು, ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

​ಮಳೆಗಾಲದಲ್ಲಿ ನರಕಯಾತನೆ:1982 ರಿಂದ ಇಂದಿನವರೆಗೂ ಈ ರಸ್ತೆ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ. ಮಳೆಗಾಲ ಬಂತೆಂದರೆ ಸಾಕು, ರಸ್ತೆ ಸಂಪೂರ್ಣ ಕೆಸರುಮಯವಾಗಿ ಪರಿವರ್ತಿತವಾಗುತ್ತದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ರೋಗಿಗಳು ಸಂಚರಿಸಲು ಹರಸಾಹಸ ಪಡುವಂತಾಗಿದೆ. ವಾಹನ ಸಂಚಾರವೂ ದುಸ್ತರವಾಗಿದ್ದು, ಗ್ರಾಮಸ್ಥರು ಸಂಪರ್ಕ ಕಡಿತದ ಭೀತಿಯಲ್ಲಿ ಬದುಕುತ್ತಿದ್ದಾರೆ.

​ಘೋಷಣೆಗಷ್ಟೇ ಸೀಮಿತವಾದ ಅನುದಾನ:ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಕಲ್ಪಿಲದಿಂದ ದೇವರಗುಡ್ಡೆಯವರೆಗಿನ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ₹30 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ, ಚುನಾವಣೆ ಮುಗಿದು ಹಲವು ಕಾಲ ಕಳೆದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ರಾಜಕೀಯ ನಾಯಕರ ಈ ಭರವಸೆ ಕೇವಲ ಮತದಾರರನ್ನು ಓಲೈಸುವ ತಂತ್ರವಷ್ಟೇ ಎಂಬುದು ಗ್ರಾಮಸ್ಥರ ಆರೋಪ.​

ಅಧಿಕಾರಿಗಳಿಗೆ ಮನವಿ:ರಸ್ತೆಯ ದುಸ್ಥಿತಿಯನ್ನು ತೋರಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ರಸ್ತೆಯನ್ನು ಪರಿಶೀಲಿಸಿ, ತಕ್ಷಣವೇ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ನಾವರ ಗ್ರಾಮದ ನಾಗರಿಕರು ಒತ್ತಾಯಿಸಿದ್ದಾರೆ.​

ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾದ ಈ ರಸ್ತೆ ಅಭಿವೃದ್ಧಿಯಾಗುತ್ತದೆಯೇ ಅಥವಾ ಮುಂದಿನ ಚುನಾವಣೆವರೆಗೂ ಭರವಸೆಯಾಗಿಯೇ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here