ಶ್ರೀರಾಮ ಸೊಸೈಟಿ ಪಂಗನಾಮ ಕೇಸು-ಮಹತ್ವದ ಆದೇಶ- ಸಂತ್ರಸ್ತ ಗ್ರಾಹಕರ ಎಫ್‌ಡಿ ಹಣ ಬಡ್ಡಿ ಸಮೇತ ವಾಪಸಾತಿಗೆ ಗ್ರಾಹಕರ ಬಿಕ್ಕಟ್ಟು ಪರಿಹಾರ ಆಯೋಗದಿಂದ ಸೂಚನೆ

0

ಬೆಳ್ತಂಗಡಿ : ಬೆಳ್ತಂಗಡಿಯ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಕೋಟಿಗಟ್ಟಣೆ ಹಣಕಾಸು ಅವ್ಯವಹಾರ ನಡೆಸಿ, ಗ್ರಾಹಕರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ, ನಿರ್ದೇಶಕರು ಸೇರಿದಂತೆ ಕೆಲ ಸಿಬ್ಬಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ಈ ಹಿಂದೆ ಮಹತ್ವದ ಆದೇಶ ನೀಡಿತ್ತು.

ಇದೀಗ ಅವ್ಯವಹಾರ ಪ್ರಕರಣದಲ್ಲಿ ದಕ್ಷಿಣ ಕನ್ನಡ ಗ್ರಾಹಕ ಬಿಕ್ಕಟ್ಟು ಪರಿಹಾರ ಆಯೋಗದಿಂದಲೂ ಮಹತ್ವದ ಆದೇಶವೊಂದು ಹೊರಬಿದ್ದಿದ್ದು, ಆಯೋಗದ ಮುಂದೆ ಕೇಸು ದಾಖಲಿಸಿದ ಎಲ್ಲಾ 24 ಸಂತ್ರಸ್ತ ಅರ್ಜಿದಾರರಿಗೆ 45 ದಿನಗಳ ಒಳಗಾಗಿ ಅವರು ಠೇವಣಿ ಇಟ್ಟಿದ್ದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು ಎಂದು ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಗೆ ಸೂಚಿಸಲಾಗಿದೆ.

ಸೊಸೈಟಿಯಲ್ಲಿ ಹಣ ಇಲ್ಲದಿದ್ದರೆ, ಆಡಳಿತ ಸಮಿತಿ ಪದಾಧಿಕಾರಿಗಳು, ನಿರ್ದೇಶಕರು ಸೇರಿ ಸಂಬಂಧಪಟ್ಟವರು ವೈಯಕ್ತಿಕ ಹಣವನ್ನು ಸೇರಿಸಿ ಸಂತ್ರಸ್ತರ ಹಣ ವಾಪಸ್‌ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಸೊಸೈಟಿಯಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಇಡಲಾಗಿದ್ದ ಹಣ ಮೆಚ್ಯುರಿಟಿಗೊಂಡ ದಿನಾಂಕದಿಂದ ಇಲ್ಲಿಯವರೆಗೆ ಅನ್ವಯವಾಗುವಂತೆ ಶೇ.೬ರಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ಅಧ್ಯಕ್ಷ ಸೋಮಶೇಖರ ಕೆ. ಹಂಡಿಗೋಳ ಮತ್ತು ಆಯೋಗದ ಸದಸ್ಯೆ ಜಿ. ಶಾರದಮ್ಮ ಅವರು ಆದೇಶ ಪ್ರಕಟಿಸಿದ್ದಾರೆ.

ಕಾನೂನು ಹೋರಾಟದ ಖರ್ಚು ವೆಚ್ಚದ ಭಾಗವಾಗಿ ಪ್ರತಿಯೊಬ್ಬ ಅರ್ಜಿದಾರರಿಗೆ ರೂ. 10 ಸಾವಿರ ಪರಿಹಾರ ಮೊತ್ತವನ್ನು ನೀಡಬೇಕು. ಈ ಹಣವನ್ನು 45 ದಿನಗಳ ಒಳಗಾಗಿ ನೀಡಲೇಬೇಕು. ಒಂದುವೇಳೆ ಆದೇಶದ ಪಾಲನೆಯಾಗದೇ ಇದ್ದಲ್ಲಿ ಮೆಚ್ಯುರಿಟಿ ದಿನಾಂಕದಿಂದ ಅನ್ವಯವಾಗುವಂತೆ ಸಂತ್ರಸ್ತರ ಹಣಕ್ಕೆ ಶೇ.8ರಷ್ಟು ಬಡ್ಡಿ ವಿಧಿಸಿ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ, ಆಗ ಪ್ರತಿವಾದಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸಂತ್ರಸ್ತರಿಗೆ ಪೂರ್ಣ ಸ್ವಾತಂತ್ರ್ಯವಿರಲಿದೆ ಎಂದು ಗ್ರಾಹಕರ ಆಯೋಗ ಶ್ರೀರಾಮ ಸೊಸೈಟಿಗೆ ಎಚ್ಚರಿಕೆ ನೀಡಿದೆ. ಅರ್ಜಿದಾರ ಗ್ರಾಹಕರ ಪರವಾಗಿ ಸುಳ್ಯ ಮರ್ಕಂಜ ಮೂಲದ ವಕೀಲರಾದ ತಿಮ್ಮಯ್ಯ ಪಿ. ಅವರು ವಾದಿಸಿದ್ದರು.

ತಕ್ಷಣ ಹಣ ಹಿಂತಿರುಗಿಸಲಿ: ಸೊಸೈಟಿ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತಲೇ ಇದ್ದೇವೆ. ಗ್ರಾಹಕರ ಆಯೋಗ ನೀಡಿರುವ ಅದೇಶ ಪಾಲನೆ ಮಾಡಿ, ತಕ್ಷಣವೇ ನಮ್ಮ ಹಣ ಹಿಂತಿರುಗಿಸಬೇಕು. ನಾವು ಬೆವರು ಸುರಿಸಿ ದುಡಿದು ಸೊಸೈಟಿಯಲ್ಲಿ ಇಟ್ಟ ಹಣದಲ್ಲಿ ಅವ್ಯವಹಾರ ಮಾಡಿದ್ದಾರೆ. ಸೊಸೈಟಿಯಲ್ಲಿ ಹಣ ಇಲ್ಲದಿದ್ದರೆ ಸ್ವಂತ ಹಣವನ್ನು ಗ್ರಾಹಕರಿಗೆ ನೀಡಲಿ. ಹಣ ವಾಪಸ್ ಮಾಡುವುದು ಅವರ ಜವಾಬ್ದಾರಿ. ಅದರಿಂದ ನುಣುಚಿಕೊಳ್ಳುವುದು ಬೇಡ

– ದಯಾನಂದ ನಾಯಕ್, ಸಂತ್ರಸ್ತ ಅರ್ಜಿದಾರರು

LEAVE A REPLY

Please enter your comment!
Please enter your name here