ನಡ ಮಲೆಯಡ್ಕ ಹಾಟ್ ಮಿಕ್ಸ್ ಘಟಕ: ಅಧಿಕಾರಿಗಳ ತಂಡದಿಂದ ಮಳೆ ನಡುವೆಯೇ ಸ್ಥಳ ಪರಿಶೀಲನೆ

0

ಬೆಳ್ತಂಗಡಿ,: ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ಜೂ. 30:ರಂದು ನಡ ಗ್ರಾಮದ ಮಲೆಯಡ್ಕ ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ “ಮುಗ್ರೋಡಿ” ಹಾಟ್ ಮಿಕ್ಸ್ ಮತ್ತು ಕಾಂಕ್ರೀಟ್ ಮಿಶ್ರಣ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಧಾರಾಕಾರ ಮಳೆಯ ನಡುವೆ ಘಟಕದ ಪ್ರತಿನಿಧಿಗಳಿಂದ ದಾಖಲೆಗಳನ್ನು ಪರಿಶೀಲನೆ ನಡೆಸಿದರು.ಸಹಾಯಕ ಆಯುಕ್ತರು ಕಂದಾಯ ದಾಖಲೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪತ್ರಗಳನ್ನು ಸ್ಥಳದಲ್ಲೇ ಪರಿಶೀಲಿಸಿದರು.

ಸಹಾಯಕ ಆಯುಕ್ತರು ಸ್ಟೆಲ್ಲಾ ವರ್ಗೀಸ್, ಪರಿಸರ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ನಡ ಗ್ರಾಮ ಪಂಚಾಯತ್ ಪಿಡಿಒ, ಕಂದಾಯ ನಿರೀಕ್ಷಕರು, ದೂರುದಾರರು ಹಾಗೂ ಘಟಕದ ಪ್ರತಿನಿಧಿಗಳು ಹಾಜರಿದ್ದರು.

ವಸತಿ ಪ್ರದೇಶದಲ್ಲಿ ಹಾಟ್ ಮಿಕ್ಸ್ ಘಟಕದಿಂದ ವಿಪರೀತ ಧೂಳು, ಶಬ್ದ ಮತ್ತು ವಾಯು ಮಾಲಿನ್ಯ ಉಂಟಾಗಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ಸ್ಥಳ ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here