






ಹತ್ಯಡ್ಕ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆ (ಅಗ್ನಿವೀರ್)ಗೆ ಆಯ್ಕೆಯಾದ ಹತ್ಯಡ್ಕ ಗ್ರಾಮದ ಹೊಸತೋಟ ಮುಂಡ್ರೆಲು ನಿವಾಸಿ ಭರತ್ ಅವರಿಗೆ ಕುಂಟಲ್ಪಳಿಕೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮ ಜೂ.28ರಂದು ನಡೆಯಿತು.
ಹೇಮಾವತಿ ಹಾಗೂ ಸುಂದರ ಗೌಡ ದಂಪತಿಯ ಪುತ್ರ ಭರತ್ ಹಾಗೂ ಅವರ ತಾಯಿ ಹೇಮಾವತಿ ಅವರನ್ನು ಯುವಕ ಮಂಡಲದ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹತ್ಯಡ್ಕ ಗ್ರಾಮದ ನಿವೃತ್ತ ಯೋಧರಾದ ಮೋಹನ ಶೆಟ್ಟಿ ಮುದ್ದಿಗೆ ಹಾಗೂ ಮಹಾಬಲ ಮುದ್ದಿಗೆ ಅವರು ತಮ್ಮ ಸೇನಾ ಸೇವೆಯ ಅನುಭವಗಳನ್ನು ಹಂಚಿಕೊಂಡು, ಭರತ್ ಅವರಿಗೆ ದೇಶಸೇವೆಯಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭರತ್, ಕಪಿಲ ಕೇಸರಿ ಯುವಕ ಮಂಡಲವು ಈ ಹಿಂದೆ ಸೇನೆಗೆ ಸೇರಲು ಆಸಕ್ತಿ ಹೊಂದಿದ ಯುವಕರಿಗಾಗಿ ಆಯೋಜಿಸಿದ್ದ ವಿಶೇಷ ಕಾರ್ಯಾಗಾರದಿಂದ ತಮಗೆ ಉತ್ತಮ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸ ದೊರೆತಿದ್ದು, ಅದೇ ಅಗ್ನಿವೀರ್ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣೆಯಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಗೌಡ ಬೊಳ್ಳೋಡಿ, ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಯುವಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ, ವಂದಿಸಿದರು.









