






ಕೊಯ್ಯೂರು: ಬಜಿಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಶಾಲಾ ಪೋಷಕರಿಂದ ಶ್ರಮದಾನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಶಾಲಾ ಆವರಣದ ಸ್ವಚ್ಛತೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಪೌಷ್ಟಿಕಯುಕ್ತ ಕೈತೋಟ ನಿರ್ಮಾಣ ಮಾಡುವುದು ಈ ಶ್ರಮದಾನದ ಮುಖ್ಯ ಉದ್ದೇಶವಾಗಿತ್ತು.
ಪೋಷಕರು ಶಾಲಾ ಆವರಣದಲ್ಲಿದ್ದ ಕಳೆಗಿಡಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ತದನಂತರ ಶಾಲಾ ಕೈತೋಟವನ್ನು (Kitchen Garden) ವ್ಯವಸ್ಥಿತವಾಗಿ ರಚಿಸಿ, ಅದರಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಉಪಯುಕ್ತವಾಗುವಂತಹ ಬಸಳೆ, ಬೆಂಡೆಕಾಯಿ, ಅಲಸಂಡೆ ಸೇರಿದಂತೆ ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ತರಕಾರಿ ಬೀಜಗಳನ್ನು ಬಿತ್ತಿ ಮಾದರಿ ಕೈತೋಟ ಮಾಡಿದರು.



ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಹರೀಶ್ ಗೌಡ ಅವರ ನೇತೃತ್ವದಲ್ಲಿ ಈ ಶ್ರಮದಾನ ಕಾರ್ಯಕ್ರಮ ನಡೆಯಿತು. ಶಾಲೆ ಮತ್ತು ಮಕ್ಕಳ ಅಭಿವೃದ್ಧಿಯನ್ನೇ ದ್ಯೇಯವಾಗಿಸಿಕೊಂಡು ಸುಮಾರು 18ಕ್ಕೂ ಹೆಚ್ಚು ಮಂದಿ ಪೋಷಕರು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಶಾಲಾ ಆವರಣದ ಸ್ವಚ್ಛತೆಯನ್ನು ಕಾಪಾಡಿ, ಮಕ್ಕಳಿಗೆ ತಾಜಾ ಮತ್ತು ರಾಸಾಯನಿಕ ಮುಕ್ತ ತರಕಾರಿ ದೊರೆಯುವಂತೆ ಶ್ರಮಿಸಿದರು.









