






ಪಡಂಗಡಿ :ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಸ್ಥಿರವಾದ, ಪರಿಣಾಮಕಾರಿಯಾದ ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜೂನ್ 26ರ ರವರೆಗೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.


ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ಪಡಂಗಡಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆಯ ಕುರಿತು ಮಾಹಿತಿ ಕಾರ್ಯಕ್ರಮವು ಜರುಗಿತು. ತನ್ನ ಮನೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಇಡೀ ಗ್ರಾಮವು ಸಮಗ್ರವಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯ. ಆದ್ದರಿಂದ ಪ್ರತೀ ಮನೆಯ ಸದಸ್ಯರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಮನೆಯಲ್ಲಿ ಉತ್ಪತ್ತಯಾಗುವ ಹಸಿಕಸವನ್ನು ತಮ್ಮ ಮನೆಯ ಹಂತದಲ್ಲೇ ಸೂಕ್ತವಾಗಿ ವಿಲೇವಾರಿ ಮಾಡಿ ಒಣಕಸವನ್ನು ಗ್ರಾಮ ಪಂಚಾಯತಿಯ ಸ್ವಚ್ಛವಾಹಿನಿಗೆ ನೀಡುವಂತೆ ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಆರೋಗ್ಯಕರವಾದ ಜೀವನ ನಡೆಸುವಂತೆ ಆರೋಗ್ಯ ಕಾರ್ಯಕರ್ತೆ ಪ್ರೀತಿ ಶೆಟ್ಟಿ ಮಾಹಿತಿ ನೀಡಿದರು.
ಮಹಾತ್ಮ ಗಾಂಧಿ ಪಡಂಗಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯು ನಿರಂತರವಾಗಿ ಸ್ವಚ್ಛತೆಯಿಂದ ಕೂಡಿರಲು ಪ್ರತೀ ಮನೆಯವರ ಸಹಕಾರ ಅತೀ ಅಗತ್ಯವೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಹಾಜರಿದ್ದರು.









