






ಕಾಯರ್ತಡ್ಕ, ಜೂನ್ 19: ಇಲ್ಲಿನ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿಯುತ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿದ್ಯುನ್ಮಾನ ಮತಯಂತ್ರ (EVM) ಮೂಲಕ ಚುನಾವಣೆ ನಡೆಸಿ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.


ನೂತನ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭವು ಜೂನ್ 19ರಂದು ನಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ಉದ್ಘಾಟಿಸಿ, ಶಾಲಾ ಮಂತ್ರಿಮಂಡಲದ ಮಹತ್ವ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲಿಸ್ನಾ ಮ್ಯಾಥ್ಯೂ ನೂತನವಾಗಿ ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿ, ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಕರೆ ನೀಡಿದರು.

ಚುನಾವಣೆಯಲ್ಲಿ ಕುಮಾರಿ ವೃಕ್ಷ ಶಾಲಾ ನಾಯಕಿಯಾಗಿ ಹಾಗೂ ಅಭಿನವ್ ಉಪನಾಯಕನಾಗಿ ಆಯ್ಕೆಯಾದರು. ಹಿತಾಶ್ರೀ, ಆತ್ಮೀ, ಲಿಖಿತ್, ನಿಖಿಲ್ ಮತ್ತು ವರ್ಷಿಣಿ ವಿವಿಧ ವಿಭಾಗಗಳ ಮಂತ್ರಿಗಳಾಗಿ ಆಯ್ಕೆಯಾದರೆ, ಸಿಂಚನ, ವಂಶಿ, ರಶ್ಮಿ, ನಿಕ್ಷಿತಾ ಜಿ. ಭಂಡಾರಿ, ಅನುಷಾ ಸೇರಿದಂತೆ ಹಲವರು ಸಹಾಯಕ ಮಂತ್ರಿಗಳಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ಮಹೀನ್ ಹಾಗೂ ಸಹಶಿಕ್ಷಕಿಯರಾದ ಪುಷ್ಪ ಮತ್ತು ಮಾರಿಯೆಟ್ ವಹಿಸಿದ್ದರು.ಮಂತ್ರಿಮಂಡಲ ಉದ್ಘಾಟನಾ ಸಮಾರಂಭದಲ್ಲಿ ಕುಮಾರಿ ಆದ್ಯ ಜೈನ್ ಸ್ವಾಗತಿಸಿದರು. ಕುಮಾರಿ ಆನ್ಸಿಲ ಕಾರ್ಯಕ್ರಮ ನಿರೂಪಿಸಿದರೆ, ಕುಮಾರಿ ಅನುಷಾ ಮ್ಯಾಥ್ಯೂ ವಂದನಾರ್ಪಣೆಗೈದರು.









