






ಉಜಿರೆ : ಇಲ್ಲಿನ ಪ್ರಗತಿನಗರ ಕಾಶಿಬೆಟ್ಟುವಿನಲ್ಲಿರುವ ಅಭ್ಯಾಸ್ ಪದವಿ ಪೂರ್ವ ಕಾಲೇಜಿನ ಆವರಣದೊಳಗೆ ಕಳೆದ ಕೆಲವು ಸಮಯದಿಂದ ಅಪರಿಚಿತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಾನೂನುಬಾಹಿರವಾಗಿ ಅತಿಕ್ರಮಣ ಪ್ರವೇಶ ಮಾಡುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಕಾಲೇಜಿನ ಆಡಳಿತಾಧಿಕಾರಿಗಳು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಕಳೆದೊಂದು ವರ್ಷದಿಂದ ಕಾಲೇಜು ಆವರಣದೊಳಗೆ ಬೇರೆ ಬೇರೆ ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನಗಳು ಹಾಗೂ ಕಾರುಗಳಲ್ಲಿ ಅನಾವಶ್ಯಕವಾಗಿ ಪ್ರವೇಶ ಮಾಡುತ್ತಿದ್ದಾರೆ. ಅಲ್ಲದೆ, ಕಾಲೇಜು ಆವರಣ ಹಾಗೂ ವಿದ್ಯಾರ್ಥಿನಿಯರ ಚಿತ್ರೀಕರಣ (ವಿಡಿಯೋ) ನಡೆಸಿ, ಅಲ್ಲಿಂದ ತಕ್ಷಣವೇ ಪರಾರಿಯಾಗುತ್ತಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.


ಇದೇ ಜೂನ್ 23ರಂದು ಮಧ್ಯಾಹ್ನ ಸುಮಾರು 2:20ರ ವೇಳೆಗೆ ಮತ್ತೆ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಕಾಲೇಜು ಆವರಣದೊಳಗೆ ಅತಿಕ್ರಮಣ ಪ್ರವೇಶ ಮಾಡಿ, ಕಾಲೇಜಿನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿನಿಯರ ಸುರಕ್ಷತೆಗೆ ಆತಂಕ:ಈ ನಿರಂತರ ಅತಿಕ್ರಮಣ ಮತ್ತು ರಹಸ್ಯ ಚಿತ್ರೀಕರಣದಿಂದಾಗಿ ಕಾಲೇಜಿನ ಆಸ್ತಿಪಾಸ್ತಿ ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಧಕ್ಕೆ ಬರುವ ಆತಂಕ ಎದುರಾಗಿದೆ. ಈ ಘಟನೆಯ ಹಿಂದೆ ದೊಡ್ಡ ಸಂಚು ಇರುವ ಶಂಕೆ ವ್ಯಕ್ತವಾಗಿದ್ದು, ಕಾಲೇಜು ಮಂಡಳಿ ಮತ್ತು ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ ಎಂದು ವಿವರಿಸಲಾಗಿದೆ.
ಕಾಲೇಜಿನ ಆಡಳಿತಾಧಿಕಾರಿಗಳು ಸ್ಥಳೀಯ ಆರಕ್ಷಕ ಠಾಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಕಾಲೇಜಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.









