ಧರ್ಮಸ್ಥಳ: ಕನ್ಯಾಡಿ ಶಾಲೆಯಲ್ಲಿ ಯಕ್ಷಧ್ರುವ ‘ಯಕ್ಷ ಶಿಕ್ಷಣ’ ತರಗತಿಗಳಿಗೆ ಸಂಭ್ರಮದ ಚಾಲನೆ

0

ಧರ್ಮಸ್ಥಳ: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-2ರಲ್ಲಿ 2026-27ನೇ ಶೈಕ್ಷಣಿಕ ವರ್ಷದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ “ಯಕ್ಷಧ್ರುವ-ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ”ವು ಜೂನ್ 23 ರಂದು ಶಾಲೆಯ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಗಣ್ಯರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳ ಯಕ್ಷಗಾನ ಕಲಿಕೆಗೆ ಶುಭ ಆರಂಭವನ್ನು ಹಾಡಿದರು.

ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಟ್ಲ ಫೌಂಡೇಶನ್ ನಡೆಸುತ್ತಿರುವ ವಿವಿಧ ಸಮಾಜಮುಖಿ ಸೇವೆಗಳು ಹಾಗೂ ಕಲೆಯ ಉಳಿವಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪಟ್ಲ ಫೌಂಡೇಶನ್ ಟ್ರಸ್ಟಿ ಭುಜಬಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್ ಅವರು ಕೂಡ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ತರಗತಿಯ ಶಿಕ್ಷಕ ಅರುಣ್ ಕುಮಾರ್ ಧರ್ಮಸ್ಥಳ ಇವರಿಗೆ ವಿದ್ಯಾರ್ಥಿಗಳ ಪರವಾಗಿ ಗೌರವಪೂರ್ವಕವಾಗಿ ವೀಳ್ಯವನ್ನು ಹಸ್ತಾಂತರಿಸಲಾಯಿತು. ತದನಂತರ ಯಕ್ಷಗಾನದ ಪುಸ್ತಕವನ್ನು ಟ್ರಸ್ಟಿ ಶ್ರೀ ಭುಜಬಲಿ ಅವರ ಮೂಲಕ ಯಕ್ಷ ಶಿಕ್ಷಣ ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ತರಗತಿಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಕೆ. ನಂದ, ಉಪಾಧ್ಯಕ್ಷೆ ಹೇಮಲತಾ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಎನ್., ಎಸ್.ಡಿ.ಎಂ.ಸಿ ಸದಸ್ಯರಾದ ರೂಪೇಶ್ ಕೆ. ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಎನ್ ಸ್ವಾಗತಿಸಿದರು. ಸಹಶಿಕ್ಷಕಿ ವಿಜಯ ಧನ್ಯವಾದ ಸಮರ್ಪಿಸಿದರೆ, ಅತಿಥಿ ಶಿಕ್ಷಕಿ ಜಯಶ್ರೀ ಸಮಗ್ರ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here