







ಬೆಳ್ತಂಗಡಿ (ಜೂನ್ 21): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 18ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ, ನೂತನ ಬ್ಲಾಕ್ ಕಚೇರಿ ಉದ್ಘಾಟನೆ, ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.21 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಟ್ಟು ಬ್ಲಾಕ್ ಅಧ್ಯಕ್ಷ ಹಂಝರಾಲಿ ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, “ದಮನಕಾರಿ ಆಡಳಿತ ಹಾಗೂ ಬೆದರಿಕೆಗಳಿಗೆ ಬಗ್ಗುವ ಪಕ್ಷ ಎಸ್‌ಡಿಪಿಐ ಅಲ್ಲ. ದೇಶದ ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧವಾಗಿ ಎಸ್‌ಡಿಪಿಐ ರಾಷ್ಟ್ರವ್ಯಾಪಿಯಾಗಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ” ಎಂದು ಹೇಳಿದರು .


ವೇದಿಕೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಲೆಕೆಮಜಲ್, ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ವ, ಅಡ್ವೋಕೇಟ್ ಕಬೀರ್, ಹನೀಫ್ ಪುಂಜಾಲಕಟ್ಟೆ, ರಹಮಾನ್ ನಾವೂರು,ಬಂಟ್ವಾಳ ಕ್ಷೇತ್ರ ಅಧ್ಯಕ್ಷರಾದ ಸಾಹುಲ್ ಎಸ್ ಎಚ್, ಹಿರಿಯ ಮುಖಂಡರಾದ ಅಬ್ಬಾಸ್ ಹಾಜಿ ಸುನ್ನತ್ ಕೆರೆ ಹಾಗೂ ಉದ್ಯಮಿ ಹಮೀದ್ ಹಾಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಗಿಗಳ ನೆರವಿಗಾಗಿ ಆಕ್ಸಿಜನ್ ಸಿಲಿಂಡರ್, ಸರ್ಜಿಕಲ್ ಬೆಡ್ ಹಾಗೂ ವೀಲ್‌ಚೇರ್‌ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 70 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.ಕಾರ್ಯಕ್ರಮದಲ್ಲಿ ಪಕ್ಷದ ಬೆಳ್ತಂಗಡಿ ಕ್ಷೇತ್ರ ನಾಯಕರು, ಕಾರ್ಯಕರ್ತರು, ಊರಿನ ನಾಗರಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









