






ಉಜಿರೆ: ಉಜಿರೆ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತರುವಂತಹ ಗಂಭೀರ ಸಮಸ್ಯೆಯೊಂದು ತಲೆದೋರಿದೆ. ಉಜಿರೆಯ ಕೆಳಗಿನ ಪೆಟ್ರೋಲ್ ಬಂಕ್ ಸಮೀಪದ ಚರಂಡಿಯಲ್ಲಿ ಕಳೆದ ಕೆಲವು ದಿನಗಳಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿದ್ದು, ತೀವ್ರ ದುರ್ವಾಸನೆ ಬೀರುತ್ತಿದೆ.


ಇದರಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ಹಾದಿಹೋಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆರಾಷ್ಟ್ರೀಯ ಹೆದ್ದಾರಿಯ ಪ್ರಮುಖ ರಸ್ತೆಯ ಪಕ್ಕದಲ್ಲೇ ಈ ರೀತಿ ಕಸ-ಕಡ್ಡಿ ಹಾಗೂ ಕೊಳಚೆ ನೀರು ಸಂಗ್ರಹಗೊಂಡಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಡೆಂಗ್ಯೂ, ಮಲೇರಿಯಾದಂತಹ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿದ್ದು, ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಉಜಿರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿಯನ್ನು ಮನಗಂಡು, ನಿಂತ ನೀರನ್ನು ತೆರವುಗೊಳಿಸಲು ತುರ್ತು ಕ್ರಮ ಕೈಗೊಂಡಿದ್ದಾರೆ. ಚರಂಡಿಯಲ್ಲಿದ್ದ ತ್ಯಾಜ್ಯವನ್ನು ಸಾಫುಗೊಳಿಸಿ, ನೀರನ್ನು ಸಕ್ಕಿಂಗ್ ಯಂತ್ರದ ಮೂಲಕ ತೆಗೆಯುವ ಕಾರ್ಯ ನಡೆಸಿದ್ದು, ಸದ್ಯದ ಮಟ್ಟಿಗೆ ಜನರಿಗೆ ನೆಟ್ಟಿಸಿರು ಬಿಡುವಂತಾಗಿದೆ.









