ಸುದ್ದಿ ನ್ಯೂಸ್ ಫಲಶೃತಿ: ‘ಸುದ್ದಿ’ ವರದಿ ಬೆನ್ನಲ್ಲೇ ಎಚ್ಚೆತ್ತ ಆಸ್ಪತ್ರೆ; ವೆನ್ಲಾಕ್‌ಗೆ ವೃದ್ಧೆ ಅಪ್ಪಿ ದಾಖಲು!

0

ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿ ಚಿಕಿತ್ಸೆ ಸಿಗದೆ 17 ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಉಜಿರೆ ನಿಡಿಗಲ್ ನಿವಾಸಿ ಅಪ್ಪಿ (ವೃದ್ಧೆ) ಅವರ ಕುರಿತು ‘ಸುದ್ದಿ ನ್ಯೂಸ್’ ಪ್ರಕಟಿಸಿದ ವಿಶೇಷ ವರದಿಗೆ ಕೊನೆಗೂ ತಾಲೂಕು ಆಸ್ಪತ್ರೆ ಎಚ್ಚೆತ್ತುಕೊಂಡಿದೆ. ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

ಉಜಿರೆಯ ನಿಡಿಗಲ್ ಮೂಲದ ವೃದ್ಧೆ ಅಪ್ಪಿ ಅವರು ಸೊಂಟದ ಮೂಳೆ ಮುರಿತದ ಶಸ್ತ್ರಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ದಾಖಲಾಗಿ ಬರೋಬ್ಬರಿ 17 ದಿನಗಳು ಕಳೆದರೂ ವೈದ್ಯರು ಯಾವುದೇ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ವೃದ್ಧೆಯು ತೀವ್ರ ನೋವಿನಿಂದ ಮಲಗಲೂ ಸಾಧ್ಯವಾಗದೆ ಒದ್ದಾಡುತ್ತಿದ್ದ ದೃಶ್ಯ ಕಂಡು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಸ್ಪತ್ರೆ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಹಿಂದೂ ಸಂಘಟನೆ ಈ ವಿಷಯ ತಿಳಿದ ತಕ್ಷಣ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ(ರಿ) ಅಳದಂಗಡಿ
ಸಮಾಜ ಸೇವಾ ಸಂಘಟನೆ ಹಾಗೂ ಯುವಶಕ್ತಿಯ ಕಾರ್ಯಕರ್ತರು ಆಸ್ಪತ್ರೆಗೆ ಧಾವಿಸಿ, ನೊಂದ ಕುಟುಂಬಕ್ಕೆ ಧೈರ್ಯ ತುಂಬಿದರು. ಬಳಿಕ ಕರ್ತವ್ಯ ನಿರತ ವೈದ್ಯರಾದ ಡಾ. ಶಶಿಕಾಂತ್ ಡೋಂಗ್ರೆ ಅವರನ್ನು ಭೇಟಿಯಾಗಿ ತೀವ್ರ ತರಾಟೆಗೆ ತೆಗೆದುಕೊಂಡರು.ವೈದ್ಯರ ಸಮಜಾಯಿಷಿ:”ಆಸ್ಪತ್ರೆಯಲ್ಲಿ ಸದ್ಯ ಫಿಸಿಷಿಯನ್ (Physician) ಇಲ್ಲದೇ ಇರುವುದು ವಿಳಂಬಕ್ಕೆ ಕಾರಣ. ಜೊತೆಗೆ ಇದೊಂದು ಹೈ-ರಿಸ್ಕ್ (High-risk) ಕೇಸ್ ಆಗಿರುವುದರಿಂದ ಶಸ್ತ್ರಚಿಕಿತ್ಸೆ ತಡವಾಗಿದೆ” ಎಂದು ವೈದ್ಯರು ಸಮಜಾಯಿಷಿ ನೀಡಲು ಯತ್ನಿಸಿದರು.ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಕಾರ್ಯಕರ್ತರು, “ಫಿಸಿಷಿಯನ್ ಇಲ್ಲದಿದ್ದರೆ ಮೊದಲೇ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕಿತ್ತು. 17 ದಿನಗಳ ಕಾಲ ವೃದ್ಧೆಯನ್ನು ನೋವಿನಲ್ಲಿ ಇಟ್ಟುಕೊಂಡಿದ್ದು ಯಾಕೆ?” ಎಂದು ಪ್ರಶ್ನಿಸಿದರು.

ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ವೈದ್ಯರು, ತಕ್ಷಣವೇ ವೃದ್ಧೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಿದರು.ಅಂಬ್ಯುಲೆನ್ಸ್ ಜೊತೆ ತೆರಳಿದ ಯುವಕರುಆಸ್ಪತ್ರೆಯ ಅದಕ್ಷತೆಯ ವಿರುದ್ಧದ ಹೋರಾಟ ಇಲ್ಲಿಗೇ ನಿಲ್ಲಲಿಲ್ಲ. ವೃದ್ಧೆ ಅಪ್ಪಿ ಅವರಿಗೆ ಮಂಗಳೂರಿನಲ್ಲಿ ಸೂಕ್ತ ಚಿಕಿತ್ಸೆ ಸಿಗುವವರೆಗೂ ಜೊತೆಯಿರಲು ನಿರ್ಧರಿಸಿದ ಅಳದಂಗಡಿಯ ಹಿಂದೂ ಸಂಘಟನೆಯ ಕಾರ್ಯಕರ್ತರು, ಆಸ್ಪತ್ರೆಯ ಅಂಬ್ಯುಲೆನ್ಸ್ ಜೊತೆಯಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೆರಳಿದ್ದಾರೆ.ಬಡ ರೋಗಿಗಳಿಗೆ ಸಕಾಲದಲ್ಲಿ ಸ್ಪಂದಿಸದ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸದ್ಯ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಸುದ್ದಿ ನ್ಯೂಸ್’ ಫಲಶ್ರುತಿಯಿಂದಾಗಿ ನೊಂದ ವೃದ್ಧೆಗೆ ಕೊನೆಗೂ ನ್ಯಾಯ ಸಿಗುವಂತಾಗಿದೆ.

LEAVE A REPLY

Please enter your comment!
Please enter your name here