






ಬೆಳ್ತಂಗಡಿ: ಕುದುರೆಮುಖ ವನ್ಯಜೀವಿ ವಿಭಾಗದ ಬಂಡಾಜೆ ಕಾಡಿನಲ್ಲಿ ಜೂ.2ರಂದು ಲಘು ಪ್ರಮಾಣದ ಗುಡ್ಡಜರಿತ ಸಂಭವಿಸಿದೆ. ದೂರದ ಅರಣ್ಯ ಪ್ರದೇಶದಲ್ಲಿ ಗುಡ್ಡ ಹಾಗೂ ಕಲ್ಲುಗಳು ಜರಿದು ಬಿದ್ದಿದ್ದು, ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಗ್ರಾಮಸ್ಥರು ಇದನ್ನು ಗಮನಿಸಿದ್ದಾರೆ.
ಜನವಸತಿ ಇಲ್ಲದ ಪ್ರದೇಶ: ಗುಡ್ಡಜರಿತ ಉಂಟಾದ ಸ್ಥಳದಲ್ಲಿ ಯಾವುದೇ ಜನವಸತಿ ಇಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಯಾವುದೇ ಜೀವಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿಲ್ಲ.


2019ರ ಕಹಿ ನೆನಪು: 2019ರ ನೆರೆ ಸಂದರ್ಭದಲ್ಲಿ ಬಂಡಾಜೆ ಅರಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಹಲವಾರು ಅವಾಂತರಗಳು ಸಂಭವಿಸಿದ್ದವು. ಆ ಭೀಕರ ನೆನಪು ಇನ್ನೂ ತಾಲೂಕಿನ ಜನರ ಮನದಲ್ಲಿ ಹಸಿರಾಗಿದೆ. ಆದರೆ ಪ್ರಸ್ತುತ ಅಂತಹ ದೊಡ್ಡ ಪ್ರಮಾಣದ ಜರಿತ ಉಂಟಾಗಿಲ್ಲ.
“ಬಂಡಾಜೆ ಅರಣ್ಯದಲ್ಲಿ ಇಂತಹ ಲಘು ಪ್ರಮಾಣದ ಕುಸಿತಗಳು ಮಳೆ ಸಂದರ್ಭದಲ್ಲಿ ಆಗಾಗ ನಡೆಯುತ್ತಿರುತ್ತವೆ. ಮಳೆಗಾಲ ಆರಂಭದಲ್ಲಿ ಗುಡ್ಡ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಂಡು ಸಣ್ಣಪುಟ್ಟ ಜರಿತಗಳು ಉಂಟಾಗುವುದು ಸಾಮಾನ್ಯ. ಇದರಿಂದ ಯಾವುದೇ ಅಪಾಯಕಾರಿ ಸನ್ನಿವೇಶ ಉಂಟಾಗುವುದಿಲ್ಲ” ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ನಿಗಾ ಮುಂದುವರಿಕೆ: ಈ ಬಾರಿ ಸಣ್ಣ ಪ್ರಮಾಣದ ಕುಸಿತ ಮಾತ್ರ ಕಂಡುಬಂದಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ನಿಗಾ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಆದರೆ ಅರಣ್ಯ ಪ್ರದೇಶಕ್ಕೆ ಅನಗತ್ಯವಾಗಿ ತೆರಳದಂತೆ ಇಲಾಖೆ ಮನವಿ ಮಾಡಿದೆ.









