







ಉಪ್ಪಿನಂಗಡಿ : ಪ್ರಸಾರ ಭಾರತಿ ದೂರದರ್ಶನದಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಶಾಸ್ತ್ರೀಯ ನೃತ್ಯ ಆಡಿಷನ್ – 2025-2026 ರಲ್ಲಿ ಅದ್ಭುತವಾಗಿ ಭರತನಾಟ್ಯ ಪ್ರದರ್ಶನ ನೀಡಿದ ನಿಟ್ಟಿನಲ್ಲಿ ಉಪ್ಪಿನಂಗಡಿಯ ಕೃತಿ ಕೈಲಾರ್ರವರಿಗೆ ಬಿ ಗ್ರೇಡ್ ಮಾನ್ಯತೆ ದೊರಕಿದೆ.


ಉಪ್ಪಿನಂಗಡಿಯ ಕೈಲಾರ್ ರಾಜಗೋಪಾಲ ಭಟ್ ಮತ್ತು ಸತ್ಯೇಶ್ವರಿ ದಂಪತಿಯ ಪುತ್ರಿಯಾಗಿರುವ ಈಕೆ ಭರತನಾಟ್ಯ ಶಾಸ್ತ್ರ ಪ್ರವೀಣೆಯಾಗಿದ್ದು, ಹಲವಾರು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಈಕೆಯ ಭರತಾನಾಟ್ಯ ಪ್ರಾವೀಣ್ಯತೆಯನ್ನು ಕಂಡ ಪ್ರಸಾರ ಭಾರತಿಯ ಆಯ್ಕೆ ಸಮಿತಿಯು ದೂರದರ್ಶನದಲ್ಲಿ ಕಾರ್ಯಕ್ರಮ ನೀಡುವ ನಿಟ್ಟಿನಲ್ಲಿ `ಬಿ’ ಗ್ರೇಡ್ ಕಲಾವಿದೆಯಾಗಿ ಇವರನ್ನು ಆಯ್ಕೆ ಮಾಡಿದೆ.
ಪ್ರಸಕ್ತ ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನ ಅತಿಮ ವರ್ಷದ ಬಿ ಬಿ ಎ ಎಲ್ ಎಲ್ ಬಿ ವಿದ್ಯಾರ್ಥಿನಿಯಾಗಿದ್ದು, ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಹಾಗೂ ವಿದುಷಿ ಸುಹಾಸಿನಿ ಕೌಲಗಿ ರವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಮಾತ್ರವಲ್ಲದೆ ವಿದ್ವಾನ್ ಡಾ. ಆರ್.ಎಸ್. ನಂದ ಕುಮಾರ್ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾರೆ. ಈಕೆ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.









