







ಬೆಳ್ತಂಗಡಿ: ಸರಕಾರಿ ಪ್ರೌಢ ಶಾಲೆ ಬೆಳ್ತಂಗಡಿ ಇದರ 2026 – 27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜೂ.1ರಂದು ನಡೆಯಿತು. ಅತಿಥಿಗಳು ಪೋಷಕರು ಮತ್ತು ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಸಡಗರದಿಂದ ಶಾಲೆಗೆ ಸ್ವಾಗತಿಸಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ಸೋಮ ಯಾಜಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆ ಹೇಳಿ ಈಗಿನ ವಿದ್ಯಾರ್ಥಿಗಳಿಗಿರುವ ಸೌಲಭ್ಯಗಳು ಅದನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.


ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾದ ಸನ್ನಡತೆಗಳ ಬಗ್ಗೆ ಹೇಳಿದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರಮೋದ್ ಆರ್ ನಾಯಕ್ ರವರು ಶಾಲಾಭಿವೃದ್ಧಿಗೆ ಬೆಂಬಲ ಸೂಚಿಸಿದರು ಹಿರಿಯ ವಿದ್ಯಾರ್ಥಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದಯ ಕುಮಾರ್ ಲಾಯಿಲ ಮೌಲ್ಯ ಮತ್ತು ವ್ಯಕ್ತಿತ್ವ ವಿಕಸನದ ಮಾಹಿತಿ ನೀಡಿದರು.
ಮುಖ್ಯಶಿಕ್ಷಕಿ ಪೂರ್ಣಿಮ ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳು ಇಲಾಖಾ ಸೌಲಭ್ಯಗಳು ಪೋಷಕರ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಜೇಮ್ಸ್ ಡಿಸೋಜ, ವಿಶ್ವನಾಥ ಶೆಟ್ಟಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮುರಲೀಧರ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಸೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಮುಗುಳಿ ಜಗದೀಶ್ ರಾವ್ ಉಚಿತವಾಗಿ ನೀಡಿದ ಶಾಲಾ ಸಮವಸ್ತ್ರವನ್ನು ಮತ್ತು ಸರಕಾರದ ಉಚಿತ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಿಕ್ಷಕಿ ಪೂರ್ಣಿಮ ಕೆಕೆ, ಪದ್ಮಜಾ ಮತ್ತು ಶೋಭಾ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಆಂಗ್ಲಭಾಷಾ ಶಿಕ್ಷಕ ನಾರಾಯಣ ಗೌಡ ಸ್ವಾಗತಿಸಿ ಚಿತ್ರಕಲಾ ಶಿಕ್ಷಕ ಮಹೇಶ್ ನಿಲಜಿ ಧನ್ಯವಾದ ಸಲ್ಲಿಸಿದ ಕಾರ್ಯಕ್ರವನ್ನು ಗಣಿತ ಶಿಕ್ಷಕ ಸುರೇಶ್ ಶೆಟ್ಟಿ ಬಿ ನಿರ್ವಹಿಸಿದರು. ಗಣಿತ ಶಿಕ್ಷಕ ತಾರನಾಥ ಸಹಕರಿಸಿದರು.









