






ಉಜಿರೆ: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರು ಮತ್ತು ಸಣ್ಣ ಕೈಗಾರಿಕೋದ್ಯಮಿಗಳು ಇದೀಗ ಹೊಸದೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಪಂಚಾಯತ್‌ನಿಂದ ಪರವಾನಿಗೆ ಪಡೆದು ಪ್ರಾಮಾಣಿಕವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದ ವರ್ತಕರಿಗೆ, ಈ ಬಾರಿ ಪರವಾನಿಗೆ ನವೀಕರಿಸಲು ಪಂಚಾಯತ್ ಆಡಳಿತವು ‘ನಮೂನೆ 11ಎ’ (Form 11A) ದಾಖಲೆಯನ್ನು ಕಡ್ಡಾಯಗೊಳಿಸಿದೆ.
ಇದರಿಂದ ಕಂಗಾಲಾಗಿರುವ ಸ್ಥಳೀಯ ವ್ಯಾಪಾರಸ್ಥರ ಸಂಘವು ಪಂಚಾಯತ್‌ಗೆ ವಿಶೇಷ ಮನವಿಯನ್ನು ಮೇ 25ರಂದು ಆಡಳಿತಾಧಿಕಾರಿ ಮಹಾವೀರ ಶೇಬಣ್ಣನವರಿಗೆ ಸಲ್ಲಿಸಿದರು.ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಣ್ಣ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಸ್ವಂತ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ವರ್ಷಗಳಿಂದ ಉದ್ಯೋಗ ಮಾಡಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಪಂಚಾಯತ್ ಅಧಿಕಾರಿಗಳು ಮನೆ ತೆರಿಗೆ ರಶೀದಿ, ಬಾಡಿಗೆ ಕರಾರು ಪತ್ರ ಮತ್ತು ವಿದ್ಯುತ್ ಬಿಲ್‌ಗಳನ್ನು ಪರಿಶೀಲಿಸಿ ಯಾವುದೇ ತೊಂದರೆಯಿಲ್ಲದೆ ವ್ಯಾಪಾರ ಪರವಾನಿಗೆಯನ್ನು ನವೀಕರಿಸಿಕೊಡುತ್ತಿದ್ದರು. ಆದರೆ, ಈ ವರ್ಷ ದಿಢೀರನೆ ಪಂಚಾಯತ್ ಆಡಳಿತವು ‘ನಮೂನೆ 11ಎ’ ನೀಡುವಂತೆ ಪಟ್ಟು ಹಿಡಿದಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.


ಈ ಹಿನ್ನೆಲೆಯಲ್ಲಿ ಸ್ಥಳೀಯ ವರ್ತಕರ ಹಾಗೂ ಸದಸ್ಯರ ಸಂಘವು ಪಂಚಾಯತ್‌ಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿದೆ. ಈಗಾಗಲೇ ಪಂಚಾಯತ್‌ನಿಂದ ಅಧಿಕೃತ ಡೋರ್ ನಂಬರ್ ಪಡೆದು, ನಿಯಮಿತವಾಗಿ ತೆರಿಗೆ ಪಾವತಿಸುತ್ತಾ ಬಂದಿರುವ ಹಳೇ ಸದಸ್ಯರಿಗೆ ‘ನಮೂನೆ 11ಎ’ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಸಂಘವು ಒತ್ತಾಯಿಸಿದೆ.

ಸಂಘದ ಬೇಡಿಕೆಗಳು ಇಲ್ಲಿವೆ:ಹಳೇ ವ್ಯಾಪಾರಿಗಳಿಗೆ ವಿನಾಯಿತಿ: ಈ ಹಿಂದಿನಂತೆಯೇ ಮನೆ ತೆರಿಗೆ ರಶೀದಿ, ಬಾಡಿಗೆ ಕರಾರು ಮತ್ತು ಕರೆಂಟ್ ಬಿಲ್ ಆಧಾರದ ಮೇಲೆ ಪರವಾನಿಗೆ ನವೀಕರಿಸಿಕೊಡಬೇಕು.ಹೊಸ ಅರ್ಜಿದಾರರಿಗೆ ಅನ್ವಯಿಸಿ: ಒಂದು ವೇಳೆ ಹೊಸದಾಗಿ ಯಾರಾದರೂ ವ್ಯಾಪಾರ ಪರವಾನಿಗೆಗೆ ಅರ್ಜಿ ಸಲ್ಲಿಸಿದರೆ, ಅಂತವರಿಂದ ನಿಯಮಾನುಸಾರ ‘ನಮೂನೆ 11ಎ’ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲಿ. ಆದರೆ ಹಳೇ ವ್ಯಾಪಾರಿಗಳಿಗೆ ತೊಂದರೆ ನೀಡಬಾರದು. ಈ ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಿದರು.
ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಅಧ್ಯಕ್ಷ ಪ್ರಸಾದ್ ಬಿ. ಎಸ್. ನಿಕಟ ಪೂರ್ವ ಅಧ್ಯಕ್ಷ ಅರವಿಂದ ಕಾರಂತ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಯು. ಹೆಚ್., ಕೋಶಾಧಿಕಾರಿ ವಿಶ್ವನಾಥ ಭಂಡಾರಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಉಜಿರೆಯ ವ್ಯಾಪಾರಸ್ಥರು ಹಾಜರಿದ್ದರು.









