







ಬೆಳ್ತಂಗಡಿ; ರೋಟರಿಯಂತಹಾಅಂತಾರಾಷ್ಟ್ರೀಯ ಛತ್ರದ ಅಡಿಯಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಆಚರಿಸುತ್ತಿರುವುದು ಸಂತಸದಾಯಕ. ನಾವೆಲ್ಲಾ ಭ್ರಮೆಗಳಿಂದ ಹೊರಬಂದು ಪ್ರಾದೇಶಿಕ ಭಾಷೆಯನ್ನು ಅವಲಂಭಿಸಿ ಸ್ವದೇಶಿ ಪರಿಮಳ ಪಸರಿಸುವ ಕೆಲಸ ಆಗಬೇಕಿದೆ. ಮಕ್ಕಳಿಗೆ ಸಂಸ್ಕೃತಿಯ ಚಿಂತನೆ ಹಾಗೂ ರಾಷ್ಟ್ರೀಯತೆ ಕಲಿಸುವುದು ಅಗತ್ಯ ಕೆಲಸ.
ಓದುವ ಹವ್ಯಾಸದಿಂದ ದೂರವಾಗುತ್ತಿದ್ದೇವೆ. ಆದ್ದರಿಂದ ಮಾತೃ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು. ರೋಟರಿ ಕ್ಲಬ್ ಬೆಳ್ತಂಗಡಿ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಮೇ.17ರಂದು ಅರಳಿಯ ರೋಟರಿ ಸೇವಾ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿಗೋಷ್ಠಿ 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷರಾಗಿದ್ದ ಕಸಾಪ ತಾಲೂಕು ಅಧ್ಯಕ್ಷ ಡಿಯದುಪತಿ ಗೌಡ ಮಾತನಾಡಿ, ದೇಶದಲ್ಲಿ ಒಂದು ಭಾಷೆಯನ್ನು ತೆಗೆದುಕೊಂಡಾಗ ಕನ್ನಡಕ್ಕೆ ಸಿಕ್ಕಷ್ಟು ಗೌರವ ಯಾವ ಭಾಷೆಗೂ ಸಿಕ್ಕಿಲ್ಲ. ಕನ್ನಡ ಸಾಹಿತ್ಯವನ್ನು ಸಮೃದ್ದಗೊಳಿಸಿದ ಎಲ್ಲಾ ಕವಿ ಪರಂಪರೆಯನ್ನು ನಾವು ಇಂದು ನೆನಪಿಸಿಕೊಳ್ಳುವಂತಾಗಿದೆ.8 ಭಾಷೆಗಳಲ್ಲಿ 17 ಮಂದಿ ಕವಿಗೋಷ್ಠಿಯಲ್ಲಿ ಭಾಗಿಯಾಗಿರುವುದು ಸಂತಸದಾಯಕ.ನಾವು ಹೆಚ್ಚು ಓದಿದರೆ ಬರೆಯಲು ಸಾಧ್ಯ.ಓದು, ಅಧ್ಯಯನ, ಶಿಕ್ಷಣದಿಂದ ಅನುಭವ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ.
ಭಾಷೆ ಸತ್ತರೆ ಸಂಸ್ಕೃತಿ ನಾಷವಾಗುತ್ತದೆ ಎಂದರು.ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ಮಾತನಾಡಿ, ವ್ಯಾವಹಾರಿಕವಾಗಿ ಪ್ರಾದೇಶಿಕ ಭಾಷೆ ಬಳಸದಿದ್ದರೆ ಭಾಷೆ ಉಳಿಸಲು ಕಷ್ಟವಾಗಬಹುದು.ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಯಲ್ಲೇ ಉನ್ನತ ವಿದ್ಯಾಭ್ಯಾಸ ಮಾಡುವ ಅವಕಾಶವಿದೆ ಎಂದರು.ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ಉಪಸ್ಥಿತರಿದ್ದು ಶುಭ ಕೋರಿದರು.


ರೋಟರಿಕ್ಲಬ್ ಅಧ್ಯಕ್ಷ ಪ್ರಕಾಶ ಪ್ರಭು ಅವರ ಹಳೆಕತೆ ಹೊಸ ರೀತಿ ಕೃತಿಯನ್ನು ಬಿಡುಗಡೆಗೊಳಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾಮ ಎಂ.ಪಿ ಶ್ರೀನಾಥ್ ಮಾತನಾಡಿ,ಹಳೆ ಕತೆಗಳಿಗೆ ಹೊಸ ರೂಪ ನೀಡಿದ್ದಾರೆ. ಅವರ 4 ಕತೆಗಳು ಸ್ರ್ತೀ ಕೇಂದ್ರಿತವಾಗಿದೆ. ಇದು ಹೊಸ ಕತೆಗಾರರಿಗೆ ಆಕರ ಗ್ರಂಥದಂತಿದೆ. ಬರೆಯುವುದು ನನ್ನ ಆತ್ಮತೃಪ್ತಿಗಾಗಿ ಎಂಬುದು ಅವರ ದೊಡ್ಡ ಗುಣ. ಈ ಕಾರ್ಯಕ್ರಮದ ಮೂಲಕ ತಾನೂ ಸಾಹಿತಿ ಅಂತ ಸಮಾಜ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ ಎಂದರು.ರಾಜೀವ ಗಾಂಧಿ ಸದ್ಭಾವನಾ ಪ್ರಶಸ್ತಿ ಪಡೆದ ರಾಜೇಶ್ ಪೈ ಅವರನ್ನು ಸನ್ಮಾನಿಸಲಾಯಿತು.
ಮನೋರಮಾ ಉದಯಚಂದ್ರ, ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಪ್ರಭು ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಡಾ. ಎಂ.ಎಂ ದಯಾಕರ್ ಧನ್ಯವಾದವಿತ್ತರು.
ಪ್ರಸ್ತಾವನೆಗೈದ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಪ್ರಭು ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಈ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ 3 ಕೋಟಿ 7 ಲಕ್ಷ ಮೊತ್ತದ ಸೇವಾ ಚಟುವಟಿಕೆ ಅನುಷ್ಠಾನ ಮಾಡಿದೆ. ರೋಟರಿಗೂ ಸಾಹಿತ್ಯಕ್ಕೂ ಸಂಬಂಧ ಇದೆ. ನಾನೂ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, 7 ಕೊಂಕಣಿ ನಾಟಕಗಳನ್ನು ಬರೆದಿದ್ದೇನೆ. ಕವನಗಳನ್ನು ರಾಗ ಸಂಯೋಜಿಸಿ ಹಾಡುವ ರೀತಿಯ ಕವನಗಳನ್ನೇ ರಚಿಸಿದ್ದೇನೆ. ಕಳೆದ 36 ವರ್ಷಗಳಿಂದ ಕನ್ನಡ ನಾಡಿನ ವಿವಿಧ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಪ್ರಸ್ತುತಪಡಿಸಿದ ಕೀರ್ತಿ ಉಳಿಸಿಕೊಂಡಿದ್ದೇನೆ ಎಂದರು.
3 ಸಾಹಿತ್ಯ ಪ್ರಬುದ್ಧ ಗೋಷ್ಠಿಗಳು;ಹೊಸ ತಲೆಮಾರು ಮತ್ತುಓದಿನ ಅಭಿರುಚಿ ವಿಷಯದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಧ್ಯಾಪಕ ಡಾ. ಹಳೆಮನೆ ರಾಜಶೇಖರ, ಮನುಜ ಮತ ವಿಶ್ವ ಪಥ ವಿಷಯದಲ್ಲಿ ಮತ್ತೋರ್ವ ಪ್ರಾಧ್ಯಾಪಕ ಡಾ.ದಿವ ಕೊಕ್ಕಡ, ತುಳುನಾಡಿನ ದೈವಾರಾಧನೆ ವಿಷಯದ ಮೇಲೆ ಜಾನಪದ ವಿದ್ವಾಂಸ ಡಾ. ರವೀಶ ಪಡುಮಲೆ ಪ್ರಬುದ್ಧ ಗೋಷ್ಠಿ ನಡೆಸಿಕೊಟ್ಟರು.ಸಾಹಿತ್ಯಾಸಕ್ತರೊಡನೆ ಸಂವಹನ ವಿಚಾರ ಗೋಷ್ಠಿಯಲ್ಲಿ ಡಾ. ಪ್ರದೀಪ ಕುಮಾರ್ ಆಟಿಕುಕ್ಕೆ ನಾವೂರು ಇವರು ಪುತ್ರಿ ಮನಶ್ವಿನಿ ಜೊತೆಗೂಡಿ ಮಂಕು ತಿಮ್ಮನ ಕಗ್ಗ ಉಪನ್ಯಾಸ ನಡೆಸಿಕೊಟ್ಟರು.
ಬಹುಭಾಷೆ ಕವಿ ಗೋಷ್ಠಿಯಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ ಮಂಡನೆ : ಬಹುಭಾಷಾ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ(ಬ್ಯಾರಿ), ರೇಣುಕಾ ಸುಧೀರ್ (ಕನ್ನಡ), ವಿದ್ಯಾಶ್ರೀ ಅಡೂರು(ತುಳು), ಸರಸ್ವತಿ ರಾಜಗೋಪಾಲ(ಹವ್ಯಕ), ಸಂಧ್ಯಾ ಪಾಳಂದೆ(ಚಿತ್ಪಾವತಿ ಮರಾಠಿ), ಸತ್ಯಲತಾ ಸಿದ್ಧಮೂಲೆ(ಕನ್ನಡ), ಮಹಾಬಲ ಗೌಡ(ತುಳು), ವೆಂಕಟೇಶ್ವರೀ ಕೃಷ್ಣ ಭಟ್(ಕನ್ನಡ), ವಸಂತಿ ನಿಡ್ಲೆ (ತುಳು), ಅರುಣಾ ಅರಿಪ್ಪಡಿತ್ತಾಯ(ಶಿವಳ್ಳಿ), ವಿನುತಾ ರಜತ ಗೌಡ (ಅರೆಭಾಷೆ), ಶಂಕರ ತ್ಹಾಮನ್ಕರ್ ಮುಂಡಾಜೆ (ಚಿತ್ಪಾವನಿ ಮರಾಠಿ), ಶ್ಯಾಮಲಾ ರಾಮ ಪ್ರಸಾದ(ಹವ್ಯಕ), ವನಜಾ ಜೋಷಿ (ಚಿತ್ಪಾವನಿ ಮರಾಠಿ), ರವೀಂದ್ರ ಶೆಟ್ಟಿ ಬಳಂಜ (ಕನ್ನಡ), ಹರೀಶ್ ನೆರಿಯ(ಕನ್ನಡ), ರೊ.ಪ್ರಕಾಶ ಪ್ರಭು(ಕೊಂಕಣಿ) ಭಾಷೆಯಲ್ಲಿ ಕವನ ವಾಚಿಸಿದರು. ಸಂಜೆ ನಡೆದಸಮಾರೋಪ ಸಮಾರಂಭದಲ್ಲಿ ಡಿ ಯದುಪತಿ ಗೌಡ ಅಧ್ಯಕ್ಷತೆಯ ಮಾತನ್ನಾಡಿದರೆ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ ಉಪಸ್ಥಿತರಿದ್ದರು. ಡಾ. ಎಂ ಎಂ ದಯಾಕರ್ ವಂದಿಸಿದರು.









