ಕ್ರಿಕೆಟ್ ಆಡುತ್ತಿದ್ದ ವೇಳೆ ಹಲ್ಲೆ ಬಂಧಿತ ಆರೀಫ್‌ಗೆ ಜಾಮೀನು

0

ಬೆಳ್ತಂಗಡಿ: ಮಾರ್ಚ್ 27ರಂದು ಲಾಯಿಲದ ಹಕೀಂ ಎಂಬವರ ಖಾಸಗಿ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ರಿಯಾಜ್ ಅಲಿಯಾಸ್ ಅಶ್ರಫ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಬಂಧನಕ್ಕೊಳಪಟ್ಟಿದ್ದ ಮೊಹಮ್ಮದ್ ಆರಿಫ್ ಕಕ್ಯಾನಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸುನೀತಾ ಜಿ.ಎಸ್. ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶಿಸಿದ್ದಾರೆ.

ಹಲ್ಲೆ ಪ್ರಕರಣದ ನಂತರ ಆರೋಪಿ ಮೊಹಮ್ಮದ್ ಆರಿಫ್ ಕಕ್ಯಾನ ವಿರುದ್ಧ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪೋಸ್ಟರ್ ಗಳಲ್ಲಿ ಆತ “ಗಾಂಜಾ ವ್ಯಸನಿ” ಎಂದು ಪ್ರಚಾರ ಮಾಡಲಾಗಿತ್ತು. ಆದರೆ, ಈ ರೀತಿಯ ಪ್ರಚಾರಗಳಿಗೆ ಯಾವುದೇ ವೈದ್ಯಕೀಯ ದಾಖಲೆಗಳಿರಲಿಲ್ಲ ಎನ್ನಲಾಗಿದೆ. ಘಟನೆ ಬಳಿಕ ಪೊಲೀಸರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಅಥವಾ ಮಾದಕ ವಸ್ತು ಸೇವಿಸಿರುವ ಕುರಿತು ಯಾವುದೇ ಉಲ್ಲೇಖ ಕಂಡುಬಂದಿರಲಿಲ್ಲ. ಪ್ರಕರಣದಲ್ಲಿ ಆರೋಪಿ ಆರಿಫ್ ಅವರನ್ನು ಬಂಧಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣದ ದಾಖಲೆಗಳು, ಗಾಯಗಳ ಸ್ವರೂಪ, ಪ್ರತಿ ದೂರು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ಯಾವುದೇ ದೃಢವಾದ ಸಾಕ್ಷ್ಯವಿಲ್ಲದೆ ‘ಗಾಂಜಾ ವ್ಯಸನಿ” ಎಂದು ಬಿಂಬಿಸಿ ಸಾಮಾಜಿಕವಾಗಿ ಅಪಪ್ರಚಾರ ಮಾಡಲಾಗಿದೆ ಎಂದು ಕುಟುಂಬಸ್ಥರು, ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರ ವಿರುದ್ಧದ ಆರೋಪಗಳ ಬಗ್ಗೆ ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕು. ಆದರೆ ತನಿಖೆ ಬಾಕಿ ಇದೆ ಎನ್ನುವುದು ಜಾಮೀನು ಮಂಜೂರು ಮಾಡಲು ಅಡ್ಡಿಯಾಗುವುದಿಲ್ಲ. ಅಲ್ಲದೆ, ಅರ್ಜಿದಾರರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಗಳು ಇರುವುದಿಲ್ಲ. ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಪಾಲಿಸುವುದಾಗಿ ತಿಳಿಸಿದ್ದು, ಜಾಮೀನು ಮಂಜೂರು ಮಾಡುತ್ತಿದ್ದೇವೆ ಎಂದು ನ್ಯಾ. ಸುನೀತಾ ಜಿ.ಎಸ್. ಅವರು ತೀರ್ಪಿನಲ್ಲಿ ದಾಖಲಿಸಿದ್ದಾರೆ. ಆರೋಪಿಯ ಮೊಹಮ್ಮದ್ ಆರಿಫ್ ಪರ ವಕೀಲರಾದ ಮುಸ್ತಾಫ ಕಟ್ಟೆ ಮತ್ತ ಶಹಜಾನ್ ಅಬ್ದುಲ್ಲಾ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here