







ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ಮುಗಿದ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದು ಕೇಂದ್ರ ಸರಕಾರದ ಇಬ್ಬಗೆ ನೀತಿಯನ್ನು ಸ್ಪಷ್ಟಪಡಿಸುತ್ತದೆ. ಒಂದು ಸಿಲಿಂಡರ್ ಮೇಲೆ ಬರೋಬ್ಬರಿ 993 ರೂಪಾಯಿಗಳನ್ನ ಹೆಚ್ಚಳ ಮಾಡಿರುವುದು ವ್ಯಾಪಾರಸ್ಥರರು ಹಾಗೂ ಜನಸಾಮನ್ಯರ ನಿದ್ದೆಗೆಡಿಸಿದೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಏಪ್ರಿಲ್ 1ರಂದು 195.50 ರೂ.ನಷ್ಟು, ಮಾರ್ಚ್ ನಲ್ಲಿ ರೂ. 142ನಷ್ಟು ಏರಿಕೆ ಮಾಡಿದ್ದು, ಕೇವಲ ಮೂರು ತಿಂಗಳಲ್ಲಿ ನಾಲ್ಕು ಬಾರಿ ಏರಿಕೆ ಮಾಡಿ 1,331 ರೂ.ನಷ್ಟು ಏರಿಕೆ ಮಾಡಲಾಗಿದೆ.


ಕೇಂದ್ರದ ಈ ದುಬಾರಿ ನೀತಿಯಿಂದ ಒಂದು ಹೊತ್ತಿನ ಕಾಫಿ, ತಿಂಡಿ ಮಾಡಲೂ ಜನಸಾಮಾನ್ಯರು ಯೋಚಿಸುವಂತಾಗಿದೆ. ಜನಸಾಮಾನ್ಯರು ಕೇಂದ್ರ ಸರಕಾರದ ನಿರ್ಧಾರಗಳಿಂದ ಕಷ್ಟಪಡುವಂತಾಗಿದೆ. ಹೋಟೆಲ್ ಉದ್ಯಮ ನಡೆಸಿಕೊಂಡು ಬದುಕುವವರಿಗೆ ಪದೇ ಪದೇ ವಸ್ತುಗಳ ಬೆಲೆ ಏರಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇತ್ತ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ತಕ್ಷಣ ಜನಸಾಮಾನ್ಯರಿಗೆ ಅತೀ ಅಗತ್ಯವಾದ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲ ದರ ಇಳಿಸುವಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಕೆಡಿಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲಾ ಹೇಳಿರುತ್ತಾರೆ.









