






ಇಂಡಸ್ಟ್ರಿಯಲ್ ಎಕ್ಸ್ಫೋ – 2026 ಕಾರ್ಯಕ್ರಮ ಕೈಗಾರಿಕೆಗಳಿಗೆ ಭವಿಷ್ಯದಲ್ಲಿ ತೊಡಗಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟಿದ್ದು, ಮುಂದಿನ ಬೆಳವಣಿಗೆಗೆ ಪ್ರೇರಣೆಯಾಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಅವರದ್ದೇ ಆದ ಕೊಡುಗೆಗಳನ್ನು ನೀಡಿರುವ ಕೈಗಾರಿಕೋದ್ಯಮಿಗಳಿಗೆ ಈ ಹಿಂದೆಯೂ ಸಹಕಾರ ನೀಡಿದ್ದೇನೆ. ಮುಂದೆಯೂ ಅವರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಸ್ಪಂದಿಸುತ್ತೇನೆ ಎಂದು ಮಾನ್ಯ ವಿಧಾನಸಭಾ ಸದಸ್ಯ ಯು.ಟಿ. ಖಾದರ್ ಹೇಳಿದರು.

ಅವರು ಮೇ. 1ರಿಂದ 3ರ ತನಕ ಕೆನರಾ ಇಂಡಸ್ಟ್ರೀಸ್ ಅಸೋಸಿಯೇಶನ್, ಇಂಡಸ್ಟ್ರಿಯಲ್ ಏರಿಯಾ ಬೈಕಂಪಾಡಿ ಮಂಗಳೂರು ಇದರ ಸಾರಥ್ಯದಲ್ಲಿ ಮಂಗಳೂರಿನ ಕರಾವಳಿ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಕೆನರಾ ಇಂಜಿನಿಯರಿಂಗ್, ಇಂಡಸ್ಟ್ರಿಯಲ್ ಟೆಕ್ ಎಕ್ಫೋ 2026ನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ. ಸಂಸದ ಬ್ರಿಜೇಶ್ ಚೌಟ ಕೈಗಾರಿಕೆಗಳು ದೇಶದ ಬೆಳವಣಿಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಕೃಷಿ ಕ್ಷೇತ್ರ ಬಿಟ್ಟರೆ ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಟಿಸಿರುವುದು ಕೈಗಾರಿಕೆಗಾ ಕ್ಷೇತ್ರ. ಮಾನ್ಯ ನರೇಂದ್ರ ಮೋದಿಯವರು ಕೈಗಾರಿಕಾ ಅಭಿವೃದ್ಧಿಗೆ ಮತ್ತು ಯುವ ಜನತೆಯಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಎಕ್ಸ್ಫೋದ ಮೂಲಕ, ಉತ್ಪನ್ನಗಳಿಗೆ ಬೇಡಿಕೆ ಮತ್ತು ಉದ್ಯೋಗವಕಾಶಗಳು ತೆರೆದುಕೊಳ್ಳಲಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ. ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಂಗಳೂರು ದಕ್ಷಿಣ ಭಾಗದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಭಾಗದ ಶಾಸಕ ಡಾ. ಭರತ್ ಶೆಟ್ಟಿ, ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮಂಜುನಾಥ ಸಿಂಗೈ, ಸಿಡ್ಬಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಲ್.ಆರ್ ನಾರಾಯಣ, ಅಚಲ್ ಕ್ಯಾಶ್ಯೋ ವ್ಯವಸ್ಥಾಪಕರಾದ ಗಿರಿಧರ್ ಪ್ರಭು, ಗರೋಡಿ ಸ್ಟೀಲ್ಸ್ ಮಾಲಕ ಮನೋಜ್ ಸಾರಿಪಳ್ಳ, ಎನ್.ಎಂ.ಪಿ.ಎ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್ ಚಂದ್ರಶೇಖರ ಪಾಲೇಕರ್, ಎಂ.ಆರ್.ಪಿ.ಎಲ್. ಗ್ರೂಪ್ ಜನರಲ್ ಮ್ಯಾನೇಜರ್ ಪ್ರಶಾಂತ್ ಶಂಕರ್ ಪೊದುವಾಲ್, ಎಕ್ಸ್ಫೋ ಚಯರ್ ಮೆನ್ ಮತ್ತು ನಿಕಟಪೂರ್ವ ಅಧ್ಯಕ್ಷ ಅರುಣ್ ಪಡಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಬಿ.ಎ. ಇಕ್ಬಾಲ್ ವಂದಿಸಿದರು. ಅಚಲ್ ಕ್ಯಾಶ್ಯೋ ವ್ಯವಸ್ಥಾಪಕರಾದ ಗಿರಿಧರ್ ಪ್ರಭು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಅತಿದೊಡ್ಡ ಇಂಡಸ್ಟ್ರಿಯಲ್ ವಸ್ತು ಪ್ರದರ್ಶನ ಇದಾಗಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 120ಕ್ಕೂ ಮಿಕ್ಕಿ ಕೈಗಾರಿಕಾ ಉತ್ಪನ್ನಗಳ ಸ್ಟಾಲ್ ಗಳು, ವಿವಿಧ ರೀತಿಯ ಖಾದ್ಯಗಳ ಮಾರಾಟ ಮಳಿಗೆಗಳು ಭಾಗವಹಿಸಿದ್ದವು. ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯಮಿಗಳು ಭಾಗವಹಿಸಿದ್ದರು.ಮೆಷಿನರಿ ಮೂಲಕ ಉತ್ಪಾದನಾ ಡೆಮೋ, ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಾಲಸೌಲಭ್ಯಗಳ ಬಗ್ಗೆ, ಉತ್ಪಾದನಾ ಘಟಕಗಳ ಸ್ಥಾಪನೆಯ ಬಗ್ಗೆ ಮಾಹಿತಿ, ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿದೆ. ಮೇ. 3ರ ತನಕ ಪ್ರತೀ ದಿನ ಬೆಳಿಗ್ಗೆ 10.00ಗಂಟೆಯಿಂದ ಸಂಜೆ 7.00 ಗಂಟೆಯ ತನಕ ಎಕ್ಸ್ಫೋ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ.









