ಮಾ. 31: ಮೂಡಬಿದಿರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬೂದಿಪಳ್ಳ ನಿವೃತ್ತಿ

0

ಮೂಡಬಿದಿರೆ ತಾಲೂಕು ಪಂಚಾಯತ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬೂದಿಪಳ್ಳರವರು ಮಾ. 31ರಂದು ಸರಕಾರಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಏನೆಕಲ್ಲು ಗ್ರಾಮದ ಬೂದಿಪಳ್ಳ ಪುಟ್ಟಪ್ಪ ಗೌಡ ಹಾಗೂ ರಾಮಕ್ಕ ದಂಪತಿಗಳ ಪುತ್ರನಾಗಿ ಜನಿಸಿ ಮಾ. 23, 1966ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಏನೆಕಲ್ಲು ಹಿ.ಪ್ರಾ.ಶಾಲೆಯಲ್ಲಿ, ಪ್ರೌಢಶಿಕ್ಷಣ ಮತ್ತು ಪಿಯುಸಿ ಶಿಕ್ಷಣವನ್ನು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದ ಬಳಿಕ ಕೆಎಸ್‌ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ (ಬಿಕಾಂ) ಪಡೆದರು. ಬಳಿಕ ಧಾರವಾಡ ವಿಶ್ವವಿಸ್ಯಾನಿಲಯದಿಂದ ಸ್ನಾತಕೋತ್ತರ ಪದವಿ (ಎಂಕಾಂ) ಪೂರೈಸಿದರು. 1989ರಿಂದ 2005ರವರೆಗೆ ಸುಮಾರು 17 ವರ್ಷಗಳ ಕಾಲ ಸುಳ್ಯದಲ್ಲಿ ಸಾಮಾಜಿಕ ವಲಯಾರಣ್ಯಾಧಿಕಾರಿಯವರ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸಿದರು. ಆ ನಂತರ ಸರಕಾರಿ ಸೇವೆ ಖಾಯಂಗೊಂಡು, 2006ರಲ್ಲಿ ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್ ೧ ಆಗಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಗೆ ನೇಮಕಗೊಂಡರು. 2010ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪದೋನ್ನತಿಗೊಂಡು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನಲ್ಲಿ 4 ವರ್ಷ, ಕೊಳ್ತಿಗೆ ಗ್ರಾ.ಪಂ.ನಲ್ಲಿ 4 ವರ್ಷ ಸೇವೆ ಸಲ್ಲಿಸಿದ್ದರು. ಇದೇ ಸಂದರ್ಭ ಪಾಣಾಜೆ, ಸವಣೂರು, ಒಳಮೊಗ್ರ ಗ್ರಾ.ಪಂ.ಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿದರು. 2015ರಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿಗೊಂಡು ಚಿಕ್ಕಮಗಳೂರು ಜಿ.ಪಂ.ನಲ್ಲಿ ಸಹಾಯಕ ಯೋಜನಾಧಿಕಾರಿ ಹುದ್ದೆಗೆ ನಿಯುಕ್ತಿಗೊಂಡರು. 2017ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗೆ ವರ್ಗಾವಣೆಗೊಂಡರು.

ಬಳಿಕ 2018ರಿಂದ 2019ರವರೆಗೆ ಬೆಳ್ತಂಗಡಿ ತಾಲೂಕು ಪಂಚಾಯತ್‌ನಲ್ಲಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2019ರ ಆಗಸ್ಟ್ ತಿಂಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಪದೋನ್ನತಿಗೊಂಡು, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಹುದ್ದೆಗೆ ಸ್ಥಳ ನಿಯುಕ್ತಿಗೊಂಡರು. ಈ ತಾಲೂಕು ಪಂಚಾಯತ್‌ನಲ್ಲಿ 2020 ಜುಲೈವರೆಗೆ ಕರ್ತವ್ಯ ನಿರ್ವಹಿಸಿ 2020 ಆಗಸ್ಟ್ ತಿಂಗಳಿನಿಂದ ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ವರ್ಗಾವಣೆಗೊಂಡು, ಅಲ್ಲಿ 3 ವರ್ಷ 4 ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿದರು. 2023 ಡಿಸೆಂಬರ್ ತಿಂಗಳಿನಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿಗೆ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡು, 8 ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿ, 2024 ಆಗಸ್ಟ್‌ನಲ್ಲಿ ಮೂಡಬಿದ್ರೆ ತಾಲೂಕಿಗೆ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡು ಕರ್ತವ್ಯದಲ್ಲಿದ್ದು, ಮುಲ್ಕಿ ತಾಲೂಕಿನ ಹೆಚ್ಚುವರಿ ಪ್ರಭಾರವನ್ನು ನಿರ್ವಹಿಸುತ್ತಿದ್ದರು.

ವಾಲಿಬಾಲ್, ಕ್ರಿಕೆಟ್, ಬಾಲ್‌ಬ್ಯಾಡ್ಮಿಂಟನ್ ಆಟಗಾರರಾಗಿರುವ ಇವರು ಉತ್ತಮ ಕ್ರೀಡಾಪಟು ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವರು. ಇವರು ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾಗಿಯೂ, ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಸ್ನೇಹಲತಾರವರು ತೊಡಿಕಾನ ಉ.ಸ.ಹಿ.ಪ್ರಾ.ಶಾಲೆಯಲ್ಲಿ ಪದವೀಧರ ಶಿಕ್ಷಕಿಯಾಗಿದ್ದಾರೆ. ಹಿರಿಯ ಪುತ್ರ ಧ್ಯಾನ್‌ರವರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿ, ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ದ್ವಿತೀಯ ಪುತ್ರ ಅಮೃತ್ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ.

LEAVE A REPLY

Please enter your comment!
Please enter your name here