






ಬೆಳ್ತಂಗಡಿ : ವಕೀಲರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.23ರಂದು ವಕೀಲರ ಭವನದಲ್ಲಿ ಆಚರಿಸಲಾಯಿತು. ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರು ದುರ್ಬಲರಲ್ಲ, ದೇಶದಲ್ಲಿ ವಿವಿಧ ಸ್ಥಾನ ಮಾನಗಳನ್ನು ಗಳಿಸಿದ್ದಾರೆ. ಛಲವುಳ್ಳ ಮಹಿಳೆಯರು ಏನು ಬೇಕಾದರೂ ಸಾಧಿಸಬಲ್ಲರು. ಎಲ್ಲರೂ ಮಹಿಳೆಯರಿಗೆ ಗೌರವವನ್ನು ನೀಡಲೇಬೇಕು ಎಂದರು.



ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ ಅವರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮಂಗಳೂರು ಉಪವಿಭಾಗದ ಅಬಕಾರಿ ಡಿವೈಎಸ್ಪಿ ಸೌಮ್ಯಲತಾ ಎನ್., ಹಿರಿಯ ವಕೀಲೆ ಸ್ವರ್ಣಲತಾ ಎ., ಆರ್ ಸುಭಾಷಿಣಿ ಹಾಗೂ ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ ಶಿವಲಿಂಗಪ್ಪ ಜಿ. ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಮನು ಬಿ.ಕೆ., ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ ಶಿವಲಿಂಗಪ್ಪ ಜಿ., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಕೋಶಾಧಿಕಾರಿ ಮಮ್ತಾಜ್ ಬೇಗಂ, ಹಿರಿಯ ವಕೀಲೆ ಸ್ವರ್ಣಲತಾ ಎ., ಆರ್ ಸುಭಾಷಿಣಿ ಉಪಸ್ಥಿತರಿದ್ದರು. ಯುವ ವಕೀಲೆ ಹೇಮಲತಾ ಹಾಗೂ ಪ್ರತೀಕ್ಷಾ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿ ಸೌಮ್ಯ ಸ್ವಾಗತಿಸಿ, ಮಮ್ತಾಜ್ ಬೇಗಂ ವಂದಿಸಿದರು.









