






ಶತಮಾನಗಳಿಂದ ಕತ್ತಲೆಯಲ್ಲಿ ದಿನದೂಡುತ್ತಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಕುಟುಂಬಗಳು ಸೇರಿದಂತೆ ಅರಣ್ಯವಾಸಿಗಳಿಗೆ ಕೊನೆಗೂ ಬೆಳಕು ನೀಡುವ ಪ್ರಕ್ರಿಯೆಯು ಇಲಾಖಾ ಮಟ್ಟದಲ್ಲಿ ತ್ವರಿತವಾಗಿ ನಡೆಯುತ್ತಿದ್ದು , ಕತ್ತಲು ಮುಕ್ತವಾಗಿ ಬೆಳಕಿನೆಡೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಾಗಲಿದೆ.
ಸುಮಾರು ಎರಡು ಶತಮಾನಗಳಿಂದಲೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಾಸಿಗಳು ವಿದ್ಯುತ್ ಬೆಳಕು ಕಾಣದೆ ಕತ್ತಲೆಯಲ್ಲಿರುವ ಬಗ್ಗೆ ಮಾಧ್ಯಮಗಳ ನಿರಂತರವಾಗಿ ವರದಿ , ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಆದಿವಾಸಿ ಸಮುದಾಯಕ್ಕೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಮುತುವರ್ಜಿ ವಹಿಸಿದ್ದು , ಇದೀಗ ವಿದ್ಯುತ್ ಪೂರೈಕೆಗಾಗಿ ರೂಪುರೇಷೆ ಸಿದ್ದಗೊಂಡಿದೆ.
2024 ರ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಆದಿವಾಸಿ ಮುಖಂಡರು , ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಆ ಬಳಿಕ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆದ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಗೊಂಡಿತು. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ , ಕುತ್ಲೂರು , ನಾವರ , ಸುಲ್ಕೇರಿಮೊಗ್ರು , ಶಿರ್ಲಾಲು , ಸವಣಾಲು , ನಡ , ನಾವೂರು , ಮಲವಂತಿಗೆ ಹೀಗೆ 9 ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತದೆ. ಇದರಲ್ಲಿ ನಡ , ಶಿರ್ಲಾಲು ಗ್ರಾಮಗಳಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಸಂಪರ್ಕಗೊಂಡಿದ್ದು , ಸುಲ್ಕೇರಿಮೊಗ್ರು ಗ್ರಾಮದಲ್ಲಿ ಮೊದಲನೇ ಹಂತದ ವಿದ್ಯುತ್ ಸಂಪರ್ಕ ಕಾಮಗಾರಿ ಪೂರ್ಣಗೊಂಡು , ಇದೀಗ ಎರಡನೇ ಹಂತದ ವಿದ್ಯುತ್ ಕಾಮಗಾರಿ ನಡೆಯುತ್ತಿದೆ. ಒಂದೆರಡು ವಾರಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು , ವಿದ್ಯುತ್ ಸಂಪರ್ಕ ನೀಡಬಹುದು.


ಇನ್ನುಳಿದಂತೆ 6 ಗ್ರಾಮಗಳು ವಿದ್ಯುತ್ ಕಾಣದ ಕತ್ತಲ ಲೋಕದಲ್ಲಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 6 ಗ್ರಾಮಗಳಲ್ಲಿ ಅರಣ್ಯ , ಕಂದಾಯ , ಮೆಸ್ಕಾಂ ಇಲಾಖೆಗಳು ಜಂಟಿ ಸರ್ವೆ ಕಾರ್ಯ ನಡೆಸಿ , ಹಲವಾರು ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿ , ನಂತರ ಖಾಸಗಿ ಏಜೆನ್ಸಿ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಇದೀಗ ಅರ್ಜಿಗೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅನುಮತಿಗಾಗಿ ರಾಷ್ಟ್ರೀಯ ಪರಿಸರ ಮಂಡಳಿಗೆ ರವಾನೆಯಾಗಿದ್ದು , ಅನುಮತಿ ಬಳಿಕ ಅರಣ್ಯ ಹಕ್ಕು ಕಾಯ್ದೆಯಡಿ ಆನ್ಲೈನ್ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಏಕಕಾಲದಲ್ಲಿ ಎಲ್ಲಾ ಗ್ರಾಮಗಳ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಮತ್ತು ರಾಜ್ಯ ಸರ್ಕಾರದ ವಿಶೇಷ ಮುತುವರ್ಜಿಯಿಂದ ತ್ವರಿತವಾಗಿ ಅನುಮತಿ ಸಿಗಬಹುದು ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. *ಶತಮಾನಗಳಿಂದ ಸಂವಿಧಾನಬದ್ಧ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಈ ಮಣ್ಣಿನ ಮೂಲನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸುತ್ತಿದೆ.
ಹತ್ತಾರು ವರ್ಷಗಳಿಂದ ನಡೆಯುತ್ತಿದ್ದ ನಮ್ಮ ಹೋರಾಟ ಇಂದು ಫಲ ಕೊಡುತ್ತಿರುವುದು ಸಂತಸ ತಂದಿದೆ. ಆದಷ್ಟು ಬೇಗ ಮೂಲನಿವಾಸಿಗಳ ಕತ್ತಲ ಲೋಕದ ಬದುಕಿಗೆ ಬೆಳಕು ಹರಿಸುವ ಕೆಲಸವಾಗಲಿ*ಜಯಾನಂದ ಪಿಲಿಕಲಪ್ರಧಾನ ಕಾರ್ಯದರ್ಶಿಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ









