







ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ,ಶ್ರೀ ಮಂಜುಳೇಶ ,ಶ್ರೀ ಬಲಮುರಿ ಗಣಪತಿ.ಶ್ರೀ ಅಮ್ಮನವರು ಹಾಗು ಶ್ರೀ ಮಹಮ್ಮಾಯಿ (ಮಾರಿಗುಡಿ) ಗೆ ಮಾ 11 ರಂದು ಬುಧವಾರ ಬೆಳಿಗ್ಗೆ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾಧವನ್ ತಂತ್ರಿಗಳ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಸುಮುಹೂರ್ತದಲ್ಲಿ ಕವಾಟೋದ್ಘಾಟನೆ ನಡೆದು ಅಭಿಷೇಕ,ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ತತ್ವಕಲಶಾಭಿಷೇಕ, ಮಹಾಬಲಿಪೀಠ ಪ್ರತಿಷ್ಠೆ, ಸಹಸ್ರ ಪರಿಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, 1008 ಕಲಶಗಳ ಬ್ರಹ್ಮಕಲಶಾಭಿಷೇಕ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಚೆಂಡೆ ಬಳಗ ,ವಾದ್ಯಮೇಳಗಳ ಜತೆಗೆ ಸಂಭ್ರಮದಿಂದ ಸಂಪನ್ನಗೊಂಡಿತು.



ಬೆಳಿಗ್ಗೆ ಸುಯಜ್ಞ ಯಾಗ ಮಂಟಪದಲ್ಲಿ ಕಿರಣ ರಾವ್ ಮತ್ತು ಮನೆಯವರ ಸೇವಾರ್ಥ ಶ್ರೀ ಹರಿವಾಯುಸ್ತುತಿ ಪುರಶ್ಚರಣ ಹೋಮವನ್ನು ವೇದಮೂರ್ತಿ ಚೆನ್ನೈ ಪುರೋಹಿತ ಹರೀಶ್ ಹೊಳ್ಳ ನೆರವೇರಿಸಿದರು. ವಿಪ್ರ ಬಾಂಧವರಿಂದ ವೇದ ಪಾರಾಯಣ,, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣ ನಡೆಯಿತು.

ಬ್ರಹ್ಮ ಕಲಶೋತ್ಸವದ ಸುಮುಹೂರ್ತದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು, ಪವಿತ್ರ ಪಾಣಿ ಶಿವರಾಮ ಪಡುವೆಟ್ನಾಯ , ನಾಳ್ವಿಕೆಯವರಾದ ಅನಂತಮೋಹನ ಮೂಡಣ್ಣಾಯ, ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ , ಶಾಸಕ ಹರೀಶ್ ಪೂಂಜ , ಸಮಿತಿ ಸಂಚಾಲಕ ಕೆ.ಮೋಹನ ಕುಮಾರ್ ,ಕೋಶಾಧಿಕಾರಿ ರಾಜೇಶ್ ಪೈ , ಬೆಂಗಳೂರು ಸಮಿತಿಯ ಮಂಜುನಾಥ ಕನ್ಯಾಡಿ,ವೆಂಕಟ್ರಮಣ ರಾವ್ , ಗಾಯಕ ಶಶಿಧರ್ ಕೋಟೆ, ಸಮಿತಿ ಪದಾಧಿಕಾರಿಗಳು ಹಾಗು ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದು ಭಕ್ತಿಭಾವದ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡರು. ಸುನಾದ ಭಜನಾ ಕುಟೀರದಲ್ಲಿ ಉದಯಾಸ್ತಮಾನ ನಿರಂತರ ಭಜನಾ ಸೇವೆ ನಡೆಯಿತು. ಮದ್ಯಾಹ್ನ ಸುಪ್ರಸಾದ ಅನ್ನಛತ್ರದಲ್ಲಿ ಪಲ್ಲಪೂಜೆ ನಡೆದು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.











