ಮಾ. 3ರಿಂದ 11ರ ವರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ; ಪತ್ರಿಕಾ ಗೋಷ್ಠಿ

0

ಉಜಿರೆ : ಸುಮಾರು 1000 ವರ್ಷಗಳ ಇತಿಹಾಸವಿರುವ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವವು 2026ನೇ ಮಾರ್ಚ್ 3ರಿಂದ ಮಾರ್ಚ್ 11 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟನ್ನಾಯರು ಹೇಳಿದರು.

ಅವರು ಫೆ. 23 ರಂದು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.

ಉಜಿರೆಯ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತಮೊತ್ತೇಸರರಾಗಿದ್ದ ಕೀರ್ತಿಶೇಷ ಯು. ವಿಜಯರಾಘವ ಪಡುವೆಟನ್ನಾಯರ ಕನಸು ಮತ್ತು ಸಂಕಲದಂತೆ ಭಕ್ತರ ಸಹಕಾರದಿಂದ ನೂತನವಾದ ರಾಜಗೋಪುರ “ವಿಜಯಗೋಪುರ” ನಿರ್ಮಾಣವಾಗಿದೆ. ಇದರ ಲೋಕಾರ್ಪಣೆ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಲಿದೆ.

ಮಾರ್ಚ್ 2ರಂದು ಬ್ರಹ್ಮಕಲಶೋತ್ಸವದ ಕಾರ್ಯಾಲಯದ ಉದ್ಘಾಟನೆ ನಡೆಯಲಿದೆ. ಅಂದು ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಹಂಗಾರಕಟ್ಟೆ ಇವರು ಆಶೀರ್ವಚನ ನೀಡಲಿದ್ದಾರೆ.

ಮಾ 4ನೇ ತಾರೀಕಿನಂದು ಎಡನೀರು ಮಠದ ಶ್ರೀಗಳ ಸಮ್ಮುಖದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಿಜಯಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಉಜಿರೆಯ ಕಿರಣ್ ರಾವ್ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಬ್ರಹ್ಮರಥದ ಸಮರ್ಪಣೆ ಮತ್ತು ಬೆನಕ ಕನ್‌ಸ್ಟ್ರಕ್ಷನ್ಸ್‌ನ ಗಣೇಶ್ ಗೌಡ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಪುಷ್ಪರಥದ ಸಮರ್ಪಣೆಯು ಮಾರ್ಚ್ 8ರಂದು ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಗಳ ಅಮೃತಹಸ್ತದಿಂದ ನಡೆಯಲಿದೆ.

ಮಾರ್ಚ್ 11ನೆಯ ತಾರೀಕಿನಂದು ಶ್ರೀ ಕುಕ್ಕೆಸುಬ್ರಹ್ಮಣ್ಯ ಮಠದ ಶ್ರೀಗಳು, ಉಡುಪಿಯ ಶ್ರೀ ಸೋದೆಶ್ರೀಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.

ತಂತ್ರಿವರೇಣ್ಯರಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಇವರ ನೇತೃತ್ವದಲ್ಲಿ ನಡೆಯಲಿದೆ.9 ದಿನಗಳ ಕಾಲ ನಡೆಯುವ ಸಭಾಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ಡಾ|| ಸ್ವಸ್ತಿ ಶ್ರೀ ಭಟ್ಟಾರಕಚಾರು ಕೀರ್ತಿ ಶ್ರೀಗಳು, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು , ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿಯವರು, ಶ್ರೀ ರಾಮಚಂದ್ರಾ ಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು, ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಕನ್ಯಾಡಿಯ ಶ್ರೀ ರಾಮ ಕ್ಷೇತ್ರದ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ಡಾ||ಮೋಹನ ಆಳ್ವ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ನಾಡಿನ ಗಣ್ಯರು ಮಹನೀಯರು ಮತ್ತು ವಿವಿಧ ಸೇವಾಕರ್ತರು ವಿಶೇಷ ಅಭ್ಯಾಗತರಾಗಿ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.ಪ್ರತಿನಿತ್ಯ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ಕೃಷ್ಣಾನುಗ್ರಹ ವೇದಿಕೆ ಮತ್ತು ಪ್ರಧಾನ ವೇದಿಕ “ಸುದರ್ಶನ”ದಲ್ಲಿ ಈಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಸುನಾದ ಭಜನಾ ಕುಟೀರದಲ್ಲಿ ನಿರಂತರ ಸುಮಾರು 160ಕ್ಕೂ ಮಿಕ್ಕಿ ಭಜನಾ ಸೇವೆ ನಡೆಯಲಿದೆ. ವಿವಿಧ ಸಂಘ ಸಂಸ್ಥೆಯವರು ಮತ್ತು ಭಕ್ತರು ಹೊರೆಕಾಣಿಕೆಯನ್ನು ಈಸಂದರ್ಭದಲ್ಲಿ ಸಮರ್ಪಿಸಲಿದ್ದಾರೆ. ಈ ಎಲ್ಲಾ ಕಾರ್ಯಗಳ ವ್ಯವಸ್ಥಿತವಾಗಿ ನಡೆಯುವ ದೃಷ್ಟಿಯಿಂದ ಅನೇಕ ಸಮಿತಿಗಳನ್ನು ರಚಿಸಿದ್ದೇವೆ. ವಿಶೇಷವಾಗಿ ಭೋಜನ ಶಾಲೆಯ ನಿರ್ಮಾಣವಾಗಿದೆ.

ರಾಜಗೋಪುರ ನಿರ್ಮಾಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶನದಲ್ಲಿ ಊರವರ ಮತ್ತು ಭಕ್ತರ ಸಂಪೂಣ ಸಹಕಾರದಿಂದ ಈ ಬ್ರಹ್ಮಕಲಶೋತ್ಸವವು ವಿಶೇಷ ರೀತಿಯಲ್ಲಿ ನಡೆಯಲಿದೆ.

ಭಗವಂತನ ಸೇವೆ ಮಾಡುವುದಕ್ಕೆ ಭಕ್ತರಿಗೆ ಅವಕಾಶವಿದು ಕಲಶಸೇವೆ, ಅನ್ನದಾನ ಸೇವೆ ಮತ್ತು ತ್ರಿಕರಣಪೂರ್ವಕವಾದ ಯಾವುದೇ ವಿಧವಾದ ಸೇವೆ ಮಾಡುವ ಅವಕಾಶ ಇದೆ.ಜಾತ್ರೆ ಮುಗಿದ ತಕ್ಷಣದಿಂದ ಪ್ರತಿನಿತ್ಯ ಭಕ್ತರು ಶ್ರಮದಾನದಲ್ಲಿ ಭಾಗವಹಿಸಿ ಸಹಕರಿಸುತ್ತಿದ್ದಾರೆ ಎಂದರು. ಬೆಂಗಳೂರು ಸಮಿತಿಯ ಮೂಲಕ ಅತೀ ಹೆಚ್ಚಿನ ಸಹಾಯಧನ, ಹೊರೆಕಾಣಿಕೆ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಕಾರ್ಯಕ್ರಮಗಳ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ಇಲ್ಲಿಯ ಬ್ರಹ್ಮಕಲಶೋತ್ಸವ ಕೆಲಸ ಕಾರ್ಯಗಳು ಕಲ್ಪನೆಗೂ ಮೀರಿದ ರೀತಿಯಲ್ಲಿ ಆಗುತ್ತಿದೆ. ಮನೆ ಮನೆಗೆ ಆಮಂತ್ರಣ ಪತ್ರಿಕೆ ತಲುಪಿಸಲಾಗಿದೆ.

ಆರ್ಥಿಕ ಸಹಾಯಧನವನ್ನು ನೀಡಿ, ಶ್ರಮದಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಬ್ರಹ್ಮಕಲಶ ಸಮಿತಿಯ ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ, ಕೋಶಾಧಿಕಾರಿ ಪ್ರಕಾಶ್ ಕುದ್ದಣ್ಣಾಯ, ಮಾಧ್ಯಮ ಸಂಚಾಲಕ ಭಾಸ್ಕರ ಹೆಗ್ಡೆ, ಸಂಚಾಲಕ ಮೋಹನ ಶೆಟ್ಟಿಗಾರ್, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ, ಸಲಹೆಗಾರ ವೆಂಕಟ್ರಮಣ ಶೆಟ್ಟಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here