






ಬೆಳ್ತಂಗಡಿ: ಕನ್ನಡ ಶಾಲೆಗಳ ಉಳಿವು ಮತ್ತು ಸಬಲೀಕರಣಕ್ಕಾಗಿ ರಾಜ್ಯಾದ್ಯಂತ ಜನ ಚಳುವಳಿಯಾಗಿ ರೂಪಿತವಾಗಿರುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ನೀಡಲಾಗುತ್ತಿರುವ ಕನ್ನಡ ರತ್ನ ರಾಜ್ಯ ಪ್ರಶಸ್ತಿಗೆ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಗ್ರಾಮೀಣ ಭಾಗದ ಪತ್ರಿಕೆಯಾಗಿ ಮತ್ತು ಕನ್ನಡ ಶಾಲೆಗಳ ಉಳಿವಿಗಾಗಿ ಅನೇಕ ವರದಿಗಳನ್ನು ಮತ್ತು ಶಾಲೆಗಳ ಮೂಲಭೂತ ಸಮಸ್ಯೆಗಳನ್ನು ಪ್ರಕಟಿಸುವ ಮೂಲಕ ಜನಜಾಗೃತಿಯಲ್ಲಿ ತೊಡಗಿಸಿಕೊಂಡು 40 ವರ್ಷಗಳನ್ನು ಪೂರೈಸಿರುವ ಸುದ್ದಿ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ.ಯು ಪಿ ಶಿವಾನಂದ ಸಹಿತ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವವರನ್ನು ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಫೆ.11ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಸಮಾವೇಶದಲ್ಲಿ ಈ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗುತ್ತದೆ. ಕನ್ನಡ ಮನಸ್ಸುಗಳ ಬೃಹತ್ ಸಂಗಮ ರಾಜ್ಯ ಸಮಾವೇಶ ಇದಾಗಿದ್ದು ಅಭಿಯಾನದ 75ರ ಸಂಭ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಫೆ.11ರಂದು ಮಧ್ಯಾಹ್ನ 2 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಪದಗ್ರಹಣ ಸಂಭ್ರಮ, ಸರ್ಕಾರಿ ಶಾಲಾ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗುರುವಂದನೆ, ಅತ್ಯುತ್ತಮ ಶಾಲಾ ಅಭಿವೃದ್ಧಿ ಸಮಿತಿ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ನೃತ್ಯ ಸಂಭ್ರಮ, ಅಂಗವಿಕಲ ವಿದ್ಯಾರ್ಥಿಗಳಿಗೆ ವೀಲ್ ಚೇಯರ್ ವಿತರಣೆ, ಶ್ರವಣಯಂತ್ರ ವಿತರಣೆ ಮುಂತಾದ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.









