






ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜಿನ ಹೊರ ಆವರಣದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ಒಂದು ದಿನದ ವ್ಯಾವಹಾರ ಮೇಳ ಭರ್ಜರಿಯಾಗಿ ಜರುಗಿತು. ಉಜಿರೆಯ ಸಂಧ್ಯಾ ಫ್ರೆಶ್ ಸಂಸ್ಥೆಯ ಸಹ-ಸ್ಥಾಪಕಿ ಹಾಗು ಉದ್ಯಮಿ ಅರ್ಚನಾ ಪೈ ವ್ಯವಹಾರ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ವ್ಯಾಪಾರ ವ್ಯವಹಾರ ಎಂಬುದು ಒಂದು ಕಲೆ. ಅದರಲ್ಲಿ ತೊಡಗಿಕೊಂಡಷ್ಟು ನಮ್ಮನ್ನು ಉತ್ತಮ ಮತ್ತು ಉನ್ನತ ಮಟ್ಟಕೇರಿಸುತ್ತದೆ. ಇದು ಗುಣಮಟ್ಟದದ ವಸ್ತುಗಳ ಪೂರೈಕೆ, ಗ್ರಾಹಕರೊಂದಿಗೆ ನಿರಂತರ ಸಂಪರ್ಕ ಮತ್ತು ವಿಶ್ವಾಸ, ಉದ್ದಿಮೆಯ ಹಣಕಾಸಿನ ವ್ಯವಹಾರ, ಇತರೆ ಉದ್ದಿಮೆಗಳೊಂದಿಗೆ ಸಹಭಾಗಿತ್ವ, ಲಾಭಾಂಶ ಹಂಚುವಿಕೆ ಇತ್ಯಾದಿ ಕೌಶಲ್ಯಗಳ ಅನುಭವವನ್ನು ನಮಗೆ ನೀಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಜಾಹಿರಾತು , ರಿಯಾಯಿತಿ ಇತ್ಯಾದಿ ಚತುರತೆಯತೆಯನ್ನು ಮಾಡುವ ಬದಲಿಗೆ ನಾವು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಗುರುತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ವ್ಯಾಪಾರ ವ್ಯವಹಾರ ಎಂಬುದು ನಮ್ಮನ್ನು ವಾಣಿಜ್ಯ ಕ್ಷೇತ್ರದಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುತ್ತದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ. ಇದರ ಭಾಗವಾಗಿ ಇಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಾಪಾರದ ಪ್ರಾಯೋಗಿಕ ಜಾಗೃತಿ ಮತ್ತು ಅನುಭವವನ್ನು ಮೂಡಿಸಲು ವ್ವಹಾರ ಮೇಳವನ್ನು ಬಹಳ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಳಿಗೆಯನ್ನು ಹರಾಜು ಮೂಲಕ ಕೊಂಡುಕೊಳ್ಳುವುದರಿಂದ ಹಿಡಿದು ಒಟ್ಟು ವ್ಯಾಪಾರದ ಲಾಭಾಂಶವನ್ನು ಹಂಚಿಕೊಳ್ಳುವ ವರೆಗೂ ಎಲ್ಲಾ ತರಹದ ವ್ಯಾವಹಾರಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ದೊರಕುವಂತೆ ಪ್ರತಿ ವರ್ಷವೂ ಮಾಡಲಾಗುತ್ತಿದೆ ಎಂದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಶಕುಂತಲಾ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ವ್ಯಾಪಾರ ಮಳಿಗೆಗಳ ಮಾಲಕರಾದ ವಿದ್ಯಾರ್ಥಿಗಳಿಗೆ ಪರವಾನಿಗೆ ಪತ್ರವನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಯುವ ಉದ್ಯಮಿ, ಉಜಿರೆಯ ಸಂಧ್ಯಾ ಪ್ರೆಶ್ ಸಂಸ್ಥೆಯ ಸಹ ಸಂಸ್ಥಾಪಕಿ ಅರ್ಚನಾ ಪೈ ರವರನ್ನು ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ರತ್ನಾವತಿ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿನಿ ಸ್ಪಂದನಾ ವಂದಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಸಚಿನ್ ಹೆಬ್ಬಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು.



ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಮತ್ತು ಪ್ರಾಯೋಗಿಕ ಕಾರ್ಯಕ್ರಮಗಳ ಆಯೋಜನೆಗೂ ಹೆಚ್ಚಿನ ಮಹತ್ವ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಇಂತಹ ವ್ಯವಹಾರ ಮೇಳದ ಆಯೋಜಿಸಿ ಸ್ವತಃ ಅವರನ್ನೇ ವ್ಯಾಪಾರ ವ್ಯವಹಾರ ಮಾಡಲು ಕಾಲೇಜು ಅನುವು ಮಾಡಿಕೊಟ್ಟಿರುವುದು ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ಪಠ್ಯದ ಜ್ಞಾನವನ್ನು ಪ್ರಾಯೋಗಿಕವಾಗಿ ಪುಸ್ತುತ ಪಡಿಸಲು ಇದೊಂದು ವೇದಿಕೆಯಾಗಿದೆ. ಇಂತಹ ವ್ಯವಹಾರ ಮೇಳಗಳು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉನ್ನತ ವ್ಯಾಪಾರ ಮತ್ತು ಉದ್ದಿಮೆದಾರರನ್ನಾಗಿ ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ.- ಅರ್ಚನಾ ಪೈ

ಯುವ ಉದ್ಯಮಿ ಪ್ರಶಸ್ತಿ ಪುರಸ್ಕೃತರು, ಉಜಿರೆ ಬೈಟ್ : 2ಕಾಲೇಜಿನ ವಾಣಿಜ್ಯ ವಿಭಾಗವು ‘ ವ್ಯವಹಾರ 2026 – ನಮ್ಮದೇ ಉದ್ಯಮವನ್ನು ಕಂಡುಹಿಡಿಯಿರಿ’ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ವಿದ್ಯಾರ್ಥಿ ಜೀವನದಿಂದಲೇ ಉದ್ಯಮವನ್ನು ಸ್ಥಾಪಿಸಲು ವಿಶಿಷ್ಟ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇದು ಹಣಕಾಸು ಯೋಜನೆ ಮತ್ತು ಲೆಕ್ಕಪತ್ರ ನಿರ್ವಹಣೆಯಿಂದ ಹಿಡಿದು ಮಾರುಕಟ್ಟೆ ಮತ್ತು ಮಾರಾಟದ ಸೃಜನಾತ್ಮಕ ಅಂಶಗಳಲ್ಲದರ ಅನುಭವವನ್ನು ನಮಗೆ ನೀಡುತ್ತದೆ – ಸೌಖ್ಯ ಎಸ್ ಜೈನ್

ವಿದ್ಯಾರ್ಥಿನಿ, (ಆಟದ ಮಳಿಗೆ ಮಾಲಕಿ)15 ಕ್ಕೂ ಹೆಚ್ಚಿನ ವಿನೂತನ ಸ್ಟಾಲ್ ಗಳು : ಒಂದು ದಿನದ ವ್ಯಾಪಾರ ವ್ಯವಹಾರ ಮೇಳದಲ್ಲಿ ಸ್ವತಃ ವಿದ್ಯಾರ್ಥಿಗಳು ವೃತಿಪ್ಪರ ವ್ಯಾಪಾರಿಗಳಿಂದ ಸಹಕಾರ ಮತ್ತು ಮಾಹಿತಿಯನ್ನು ಪಡೆದು ಕಾಲೇಜಿನ ಹೊರ ಆವರಣದಲ್ಲಿ ಒಟ್ಟು 17 ವ್ಯಾಪಾರ ಮಳಿಗೆಗಳನ್ನು ಹಾಕಿದ್ದರು. ತಂಪು ಪಾನೀಯ, ತರಕಾರಿ, ಚಾಟ್ಸ್ , ಆಟದ ಮಳಿಗೆಗಳಿಂದ ಕೂಡಿದ ಫೈವ್ ಸ್ಟಾರ್ ಫ್ಲೇಕನ್ ಪ್ಲೇಟ್, ಗೇಮ್ ಝೋನ್, ಯಂಗ್ & ಬ್ಯೂಟಿಫುಲ್, ಸಿಪ್ ಜ್ಯೂಸ್ , ದಿ ಗೇಮಿಂಗ್ ಅರೇನಾ, ಬ್ರದರ್ಸ್ ಪೊಟೇಟೋ ಟ್ವಿಸ್ಟರ್, ಗುಡ್ಡವನ ಸೈಕಲೆ ಚರುಮುರಿ, ಸೋಡಾ ಶರಬತ್ತು, ಎಸ್.ಡಿ.ಎಂ ಟ್ರೇಡರ್ಸ್, ಫ್ರೀಜ್ ಅಂಡ್ ಸ್ಕ್ವೀಜ್, ಗೇಮಿಂಗ್ ಹೌಸ್,ಯುನೈಟೆಡ್ ಚಾಟ್ಸ್, ಹೋಮ್ಲಿ ಬೈಟ್ಸ್, ಗೇಮಿಂಗ್ ಕ್ರಾನಿಕಲ್ ಇತ್ಯಾದಿ ನಾಮ ಫಲಕಗಳ ಮಳಿಗೆಗಳು ಗಮನ ಸೆಳೆದವು.4000 ಕ್ಕೂ ಅಧಿಕ ಜನ ವ್ಯವಹಾರ ಮೇಳದಲ್ಲಿ ಭಾಗಿ : ವ್ಯವಹಾರ ಮೇಳದಲ್ಲಿ ವ್ಯಾಪಾರದ ಸಂಪೂರ್ಣ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ವಹಿಸಿಕೊಂಡಿದ್ದರು. ಮೇಳದಲ್ಲಿ ಎಸ್.ಡಿ.ಎಂ ಸಂಸ್ಥೆಯ ವಿವಿಧ ಕಾಲೇಜು ಹಾಗು ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಹಾಗು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಒಟ್ಟಾರೆಯಾಗಿ 4000 ಕ್ಕೂ ಅಧಿಕ ಜನರು ವ್ಯವಹಾರ ಮೇಳದಲ್ಲಿ ಪಾಲುದಾರರಾದರು.









