ಹೋಲಿ ರಿಡೀಮರ್ ಶಾಲೆಯಲ್ಲಿ “ಆರ್ಟ್ ಕಾರ್ನಿವಲ್ 2026” ವಸ್ತು ಪ್ರದರ್ಶನ

0

ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ‘ಆರ್ಟ್ ಕಾರ್ನಿವಲ್ 2026’ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಚಿತ್ರ ಮತ್ತು ಕಸದಿಂದ ರಸದಂತೆ ಹೊರಹೊಮ್ಮಿದ ಮನೋಹರ ಕಲಾತ್ಮಕ ವಸ್ತುಗಳ ಪ್ರದರ್ಶನ ಜ. 24ರಂದು ಏರ್ಪಟ್ಟಿತು.

ಮುಖ್ಯ ಅತಿಥಿಯಾಗಿ ಅಳದಂಗಡಿ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪ ಬಣ್ಣಗಳಿಂದ ಜ್ಞಾನದ ಬೆಳಕೆಂಬ ಚಿತ್ತಾರವನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಮನಸ್ಸಿನ ಭಾವನೆಗಳನ್ನು ಬಣ್ಣ ರೇಖೆಗಳಲ್ಲಿ ವ್ಯಕ್ತಪಡಿಸುವ ಕ್ರಿಯಾತ್ಮಕ ಚಟುವಟಿಕೆಯೇ ಕಲೆ. ಮಕ್ಕಳು ತಮ್ಮಲ್ಲಿರುವ ಸೃಜನಾತ್ಮಕತೆಯಿಂದ ಕಲಾತ್ಮಕ ಮನೋಭಾವನೆಯನ್ನು ಮೈಗೂಡಿಸಿಕೊಂಡು ಉತ್ತಮ ಕಲೆಗಾರರಾಗಬೇಕೆಂದು ನುಡಿದರು ಮತ್ತು ಕಾರ್ಯಕ್ರಮದ ಆಯೋಜನೆ ಹಾಗೂ ಮಕ್ಕಳ ಕೈಚಳಕವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಫಾ. ವೋಲ್ಟರ್ ಡಿಮೆಲ್ಲೋ ರವರು ಮಕ್ಕಳು ಜ್ಞಾನದ ಬೆಳಕಿನಂತೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಬೇಕೆಂದು ಪ್ರೇರೇಪಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಫಾ. ಕ್ಲಿಫರ್ಡ್ ಪಿಂಟೋ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಚರ್ಚ್ ಪಾಲನಾ ಮಂಡಳಿಯ 21 ಆಯೋಗಗಳ ಸಂಯೋಜಕ ತೋಮಸ್ ಪಿಂಟೋ ಉಪಸ್ಥಿತರಿದ್ದರು.

ವಿಶೇಷ ಆಕರ್ಷಣೆಯಾಗಿ ಮಕ್ಕಳು ಮದರಂಗಿ, ಮುಖವರ್ಣ, ಕ್ಲೇ ಮಾಡೆಲ್, ಗ್ಲಾಸ್ ಪೈಂಟಿಂಗ್, ಸ್ಟೋನ್ ಆರ್ಟ್, ಲೀಫ್ ಆರ್ಟ್, ಥ್ರೆಡ್ ಆರ್ಟ್, ಬಳೆ ಮತ್ತು ಕಿವಿಯೋಲೆ ತಯಾರಿ , ವಿವಿಧ ಆಟಗಳು, ಹಳೆ ಕಾಲದ ವಸ್ತುಗಳ ಪ್ರದರ್ಶನವು ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಯಿತು.

ಚಿತ್ರಕಲಾ ಶಿಕ್ಷಕಿ ಶ್ವೇತಾ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಆಡ್ಲಿನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಚಿತ್ರಕಲಾ ಶಿಕ್ಷಕಿಯ ನೇತೃತ್ವದಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು. ಅಪಾರ ಸಂಖ್ಯೆಯ ಪೋಷಕರ ಆಗಮನವು ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here