






ಕಕ್ಕಿಂಜೆ: ಸರಕಾರಿ ಪ್ರೌಢ ಶಾಲೆಯಲ್ಲಿ ಜಮೀಯ್ಯತ್ತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷಾ ಪೂರ್ವ ತರಬೇತಿ ಶಿಬಿರವು ಘಟಕದ ಅಧ್ಯಕ್ಷ ಖಾಲಿದ್ ಪುಲಾಭೆಯವರ ಅಧ್ಯಕ್ಷತೆಯಲ್ಲಿ ಜ.22ರಂದು ಜರುಗಿತು. ಅಧ್ಯಕ್ಷ ಖಾಲಿದ್ ಪುಲಾಭೆಯವರು ಅಧ್ಯಕ್ಷೀಯ ಭಾಷಣ ಮಾಡಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಇನ್ನುಳಿದಿರುವುದು ಕೆಲವೇ ದಿನಗಳು ಮಾತ್ರ, ಇನ್ನುಳಿದ ದಿನಗಳಲ್ಲಿ ಬೇರಾವುದೇ ಶುಭ ಸಮಾರಂಭಗಳ ಕಡೆ ಗಮನ ಹರಿಸಿದೆ ಕೇವಲ ಓದು ಬರಹದ ಕಡೆ ಮಾತ್ರ ಗಮನ ಹರಿಸಿದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆದು ತಮ್ಮ ಭವಿಷ್ಯದ ಭದ್ರತೆಯನ್ನು ನಿರೂಪಿಸಲು ಸಾಧ್ಯವಾಗುತ್ತದೆ ಎಂದರು.



ವಿಶೇಷ ಆಹ್ವಾನಿತ ಶಿಕ್ಷಕರಾದ ಶರೀಫ್ ಹಾಗೂ ಶರತ್ ಅವರು ತರಗತಿ ನಡೆಸಿಕೊಟ್ಟರು. ನಿಕಟ ಪೂರ್ವ ಅಧ್ಯಕ್ಷ ಶೇಕುಂಞ ಹಾಜಿಯವರು ಮಾತನಾಡಿ ಶುಭ ಹಾರೈಸಿದರು. ಕಾರ್ಯದರ್ಶಿ ಉಮ್ಮರ್ ಬೆಳ್ತಂಗಡಿ, ಮಾಜಿ ಅಧ್ಯಕ್ಷ ಅಬ್ಬೊನು ಮದ್ದಡ್ಕ, ರಶೀದ್ ಕಕ್ಕಿಂಜೆ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶಂಭು ಶಂಕರ್ ರವರು ಮಾತನಾಡಿ ಜಮೀಯ್ಯತ್ತುಲ್ ಫಲಾಹ್ ಘಟಕದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೋರ್ವ ಮಾಜಿ ಅಧ್ಯಕ್ಷ ಹಾಜಿ ಉಮ್ಮರ್ ಕುಂಞಿ ನಾಡ್ಜೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಶಿವಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.









