ಗಾಂಜಾ ಸಾಗಾಟ ಪ್ರಕರಣ ಪತ್ತೆ: ಚಾರ್ಮಾಡಿಯ ರಫೀಕ್, ಅಬ್ದುಲ್ ಸಾದಿಕ್ ಬಂಧನ

0

ಬೆಳ್ತಂಗಡಿ: ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಗಾಂಜಾ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಈರ್ವರನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಒಂದು ಕಾರು ಮತ್ತು ಒಂದು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಜ.19ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಕಾರು ಹಾಗೂ ಗೂಡ್ಸ್ ವಾಹವನ್ನು ತಪಾಸಣೆಗಾಗಿ ನಿಲ್ಲಿಸಿದ್ದಾರೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ತಾನು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ರಫೀಕ್ ಪಿ(37) ಎಂದು ತಿಳಿಸಿದ್ದಾನೆ. ಆತನ ವರ್ತನೆಯಿಂದ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್‌ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿದ್ದ ಕಟ್ಟು ಪತ್ತೆಯಾಗಿದೆ. ಆ ಬಳಿಕ ಗೂಡ್ಸ್ ವಾಹನದ ಚಾಲಕನನ್ನು ವಿಚಾರಿಸಿದಾಗ ಆತ ತಾನು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅಬ್ದುಲ್ ಸಾದಿಕ್ (37) ಎಂದು ತಿಳಿಸಿದ್ದಾನೆ. ಆತನ ವಾಹನ ಪರಿಶೀಲಿಸಿದಾಗ ವಾಹನದಲ್ಲಿ 106 ಕಿಲೋ ಗ್ರಾಂ ಮತ್ತು 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ರೂ. 53,03,000 ಆಗಬಹುದು ಎಂದು ಅಂದಾಜಿಸಲಾಗಿದೆ. ಗಾಂಜಾ ಸೊಪ್ಪುಗಳನ್ನು ಕೇರಳ ಹಾಗೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಗಾಂಜಾವನ್ನು, ಸಾಗಾಣಿಕೆಗೆ ಬಳಸಿದ ವಾಹನಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಆರೋಪಿಗಳಾದ ಚಾರ್ಮಾಡಿಯ ರಫೀಕ್ ಪಿ. ಮತ್ತು ಅಬ್ದುಲ್ ಸಾದಿಕ್‌ನನ್ನು ಬಂಧಿಸಲಾಗಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಗುಣಪಾಲ ಜೆ. ಹಾಗೂ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ ಹಾಗೂ ವಿನೋದ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here