






ಕಳೆಂಜ: ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಪರಪ್ಪು ಇದರ ವಾರ್ಷಿಕ ಭಜನೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ಜ.14 ರಂದು ನಡೆಯಿತು. ಕುಣಿತ ಭಜನಾ ತರಬೇತಿಯ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷರಾದ ದಿನೇಶ್ ಗೌಡ ಸೀಮುಳ್ಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿನೇಂದ್ರ ಜೈನ್ ಪರಪ್ಪು ಗುತ್ತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ ಧರ್ಮಸ್ಥಳ ವಲಯ ಇದರ ಮೇಲ್ವಿಚಾರಕ ರವೀಂದ್ರ ಬಿ., ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಕಳೆಂಜ ಗ್ರಾಮ ಪಂಚಾಯತ್ ಸದಸ್ಯರುಗಳಾದ ಟಿ. ಎಸ್. ನಿತ್ಯಾನಂದ ರೈ ಮತ್ತು ಪ್ರೇಮ ಬಿ. ಎಸ್., ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು,.ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ತುಳಸಿ ಉಪಸ್ಥಿತರಿದ್ದರು.
ಟಿ.ಎಸ್ ನಿತ್ಯಾನಂದ ರೈ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಭಜನಾ ಮಂಡಳಿಯ ಇತಿಹಾಸ ಹಾಗೂ ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು. ರವೀಂದ್ರ ಬಿ. ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿಗುವ ಅನುದಾನ ಹಾಗೂ ಇತರ ಹಲವಾರು ಸೌಲಭ್ಯಗಳ ಕುರಿತು ಮಾತನಾಡಿದರು. ಜಿಲ್ಲಾ ಸಮನ್ವಯ ಅಧಿಕಾರಿಯಾದ ಸಂತೋಷ್ ಅಳಿಯೂರು ಮಾತನಾಡಿ ಭಜನೆಯಿಂದ ವಿಭಜನೆಯಿಲ್ಲ. ಭಜನೆ ಮಾನಸಿಕ ಆರೋಗ್ಯಕ್ಕೆ ಅಗತ್ಯ. ಭಜನೆಯಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು. ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ್ ಗೌಡ ಊರಿನ ವಿಶೇಷತೆ ಹಾಗೂ ಇಲ್ಲಿನ ಪುರುಷರಬಳಗದ ವಿಶೇಷತೆ ಕುರಿತು ಮಾತನಾಡಿದರು. ವಾರ್ಷಿಕ ಭಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಬಹುಮಾನವನ್ನು ವಿತರಿಸಲಾಯಿತು.


ಭಜನಾ ಮಂಡಳಿಗೆ ಉದಾರವಾಗಿ ಆರ್ಥಿಕ ಸಹಾಯ ನೀಡುತ್ತಿರುವ ಜಿತೇಂದ್ರ ಜೈನ್ ಪರಪ್ಪು ಗುತ್ತು, ಭಜನಾ ಮಂಡಳಿಯ ಹಿರಿಯ ಅರ್ಚಕರಾದ ಬಾಬುಗೌಡ ವಳಗುಡ್ಡೆ ಮತ್ತು ಮಂದಿರಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಒದಗಿಸಿ ಕೊಟ್ಟಿರುವ ವಿಮಲಾ ಪೂಜಾರಿ ಪೊಸೊಳಿಗೆ ಇವರನ್ನು ಅಭಿನಂದಿಸಲಾಯಿತು. 2024 25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ನಂತರ ಹಲವು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಕಾರ್ಯದರ್ಶಿ ಹಾಗೂ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂದೇಶ್ ಬಿ. ಸುವರ್ಣ ಮದ್ದಡ್ಕ, ಶ್ರೀ ಧರ್ಮಸ್ಥಳ ಭಜನಾ ಪರಿಷತ್ತಿನ ಗೌರವ ಸಲಹೆಗಾರರು ಹಾಗೂ ಕುಣಿತ ಭಜನಾ ಗುರು ನಾಗೇಶ್ ಬಿ. ನೆರಿಯ, ವಿಜಯ ಬ್ಯಾಂಕ್ ನ ನಿವೃತ್ತ ಹಿರಿಯ ಮ್ಯಾನೇಜರ್ ಹಾಗೂ ಮಂಡಳಿಯ ಸ್ಥಾಪಕರಲ್ಲಿ ಒಬ್ಬರಾದ ಚಂದ್ರಹಾಸ ರೈ ಮುಕ್ರುಂಪಾಡಿ ದರ್ಬೆ ಪುತ್ತೂರು, ಉಜಿರೆ ಎಸ್. ಡಿ. ಎಂ. ಎಜುಕೇಶನಲ್ ಸೊಸೈಟಿ ಇದರ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಯುವರಾಜ ಪುವಾಣಿ ಹಾಗೂ ಡಾಕ್ಟರೇಟ್ ಪ್ರಶಸ್ತಿ ವಿಜೇತ ಉಜಿರೆ ಶ್ರೀ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾಗಿರುವ ಡಾ. ಶೋಭಾ ಪಿ. ಮುಂತಾದವರನ್ನು ಸನ್ಮಾನಿಸಲಾಯಿತು. ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಸಹಕರಿಸಿದ ಎಲ್ಲರನ್ನು ಸ್ಮರಿಸಿ ಎಲ್ಲರಿಗೂ ಶುಭ ಹಾರೈಸಿದರು.
ಸುರೇಶ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯ ಅಕ್ಷತ್ ರೈ ಗುತ್ತಿಮಾರು ಸ್ವಾಗತಿಸಿ, ಭಜನಾ ಮಂಡಳಿಯ ಕಾರ್ಯದರ್ಶಿ ಅನುಪ್ ನಾಯ್ಕ್ ವಂದಿಸಿದರು.









