






ಉಜಿರೆ: ಜೆಸಿಐ ಉಜಿರೆ ಸಿಟಿ ಘಟಕದ ವತಿಯಿಂದ ವಲಯ ಮಟ್ಟದ ಕಾರ್ಯಕ್ರಮವಾದ ‘ಯುವಶಕ್ತಿ ಅಭಿಯಾನ’ ತರಬೇತಿ ಕಾರ್ಯಕ್ರಮವನ್ನು ಕಲ್ಮಂಜದ ಸರಕಾರಿ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಉಜಿರೆ ಸಿಟಿ ಘಟಕದ ಅಧ್ಯಕ್ಷ ಮೊಹಮ್ಮದ್ ಮಿರ್ಷಾದ್ ಅವರು ಮಾತನಾಡಿ, ಯುವಶಕ್ತಿಯ ಸಕಾರಾತ್ಮಕ ಬದಲಾವಣೆಯ ಹಿನ್ನೆಲೆಯಲ್ಲಿ ಜೆಸಿಐ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಇಂತಹ ತರಬೇತಿಗಳ ಮಹತ್ವದ ಬಗ್ಗೆ ತಿಳಿಸಿದರು. ಯುವ ಸಮುದಾಯದಲ್ಲಿ ವ್ಯಕ್ತಿತ್ವ ವಿಕಸನದ ಮುಖ್ಯ ಉದ್ದೇಶ ಇಟ್ಟುಕೊಂಡಿರುವ ಜೆಸಿರ ಸಿಟಿ ಘಟಕವು ಪ್ರಸ್ತುತ ವರ್ಷದಲ್ಲಿ ಯುವ ಸಬಲೀಕರಣದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ಹಮ್ಮಿಕೊಂಡಿರುವುದಲ್ಲದೆ ಹಲವು ಸಮುದಾಯದತ್ತ ಚಟುವಟಿಕೆಗಳ ಮಹತ್ತರ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎನ್ನುವ ಮೂಲಕ ಸ್ಪೂರ್ತಿಯ ಮಾತುಗಳನ್ನಾಡಿದರು.



ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಅವರು ಎಲ್ಲರನ್ನು ಸ್ವಾಗತಿಸಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಜೆಸಿಐ ಸಂಸ್ಥೆಯು ನೀಡುತ್ತಿರುವ ನಿರಂತರ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಜೆಸಿಐ ವಲಯ ತರಬೇತುದಾರರಾದ ಹೇಮಾವತಿ ಕೆ. ಅವರು ವಿದ್ಯಾರ್ಥಿಗಳಿಗೆ ಅದ್ಭುತವಾಗಿ ತರಬೇತಿ ನೀಡಿದರು. ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಅವುಗಳನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸುವುದು ಹೇಗೆ, ಸಕಾರಾತ್ಮಕ ಬದಲಾವಣೆ ಹೇಗೆ ಸಾಧ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಿದರು. ಅಲ್ಲದೆ, ಕೌಶಲ್ಯಾಧಾರಿತ ಚಟುವಟಿಕೆಗಳ ಮೂಲಕ ಯಶಸ್ವಿ ನಾಯಕನಾಗುವ ಹಾದಿಯನ್ನು ಮನೋಜ್ಞವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮವು ಫಾತಿಮತ್ ಸಹ್ಲಾ ರವರ ಜೆಸಿ ವಾಣಿಯೊಂದಿಗೆ ಆರಂಭವಾಯಿತು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್ ವಂದಿಸಿದರು.









