






ಬೆಳ್ತಂಗಡಿ: ಹಿಂದೂ ಸಂಗಮ ಆಯೋಜನಾ ಸಮಿತಿ, ಬೆಳ್ತಂಗಡಿ ತಾಲೂಕು ಇದರ ಯೋಜನೆಯಂತೆ 2026ನೇ ಇಸವಿಯ ಜ.18 ರಿಂದ ಪ್ರಾರಂಭವಾಗಿ ಫೆ.1 ವರೆಗೆ ಬೆಳ್ತಂಗಡಿ ತಾಲೂಕಿನ ಏಳು ಪ್ರಮುಖ ಮಂಡಲಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ಒಬ್ಬ ಸಂಘಟನೆ ಅಥವಾ ವ್ಯಕ್ತಿಯ ಕಾರ್ಯಕ್ರಮವಲ್ಲ, ಸಮಾಜದೊಳಗಿನ ಶಕ್ತಿಯನ್ನು ಒಂದೇ ವೇದಿಕೆಗೆ ತರುವ ಸಮಾಜವೇ ರೂಪಿಸಿ ಸಮಾಜವೇ ನಡೆಸುವ ಮಹತ್ವದ ಸಾಮಾಜಿಕ ಕಾರ್ಯಕ್ರಮವಾಗಿದೆ ಎಂದು ಗುರುವಾಯನಕೆರೆ ಮಂಡಲ ಹಿಂದೂ ಸಂಗಮ ತಾಲೂಕು ಸಂಯೋಜಕ ಅನಿಲ್ ಕುಮಾರ್ ಯು ಹೇಳಿದರು. ಅವರು ಜ.13 ರಂದು ಬೆಳ್ತಂಗಡಿ ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇಂದಿನ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿರುವುದು, ಸಾಮಾಜಿಕ ಸಾಮರಸ್ಯಕ್ಕೆ ಸವಾಲುಗಳು ಎದುರಾಗುತ್ತಿರುವುದು ಪರಿಸರ ಸಂರಕ್ಷಣೆಯ ಅಗತ್ಯ ತೀವ್ರವಾಗಿರುವುದು ಹಾಗೂ ಸ್ವಾವಲಂಬಿ ಸ್ಯಾಭಿಮಾನಿ ಜೀವನ ಪದ್ಧತಿಯ ಅವಶ್ಯಕತೆ ಹೆಚ್ಚಾ,ತ್ತಿರುವ ಹಿನ್ನಲೆಯಲ್ಲಿ ಈ ಹಿಂದು ಸಂಗಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ಬೆಳಸುವುದೇ ಇದರ ಪ್ರಧಾನ ಉದ್ದೇಶವಾಗಿದೆ.
ಸಾಮಾಜಿಕ ಸೇವೆ, ಸಹಕಾರ, ಸ್ವಾವಲಂಬನೆ ಮತ್ತು ಸೇವಾಭಾವನೆಗಳನ್ನು ಉತ್ತೇಜಿಸುವ ಸಲುವಾಗಿ ಸಮಾಜದ ಸಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೀತಿಯ ಸ್ವಯಂಸೇವಾ ಸಂಸ್ಥೆಗಳು ಸಂಘಟನೆಗಳು ಹಾಗೂ ಸಮುದಾಯದ ಹಿರಿಯರು, ಯುವಕರು ಮತ್ತು ಮಹಿಳೆಯರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಇದು ಸಮಾಜದ ಎಲ್ಲ ವರ್ಗಗಳನ್ನು ಒಟ್ಟುಗೂಡಿಸುವ ಸಮನ್ವಯದ ರೀತಿ ಆಯೋಜನೆ ಮಾಡಿದ್ದೇವೆ.
ಹಿಂದು ಸಂಗಮದ ಮೂಲಕ ಕೌಟುಂಬಿಕ ಮೌಲ್ಯಗಳ ಪುನರುತ್ಹಾನ, ಸಾಮಾಜಿಕ ಸಾಮರಸ್ಯದ ಜಾಗರಣೆ, ಪರಿಸರ ಸಂರಕ್ಷಣೆಯ ಸಂಕಲ್ಪ ಸ್ಥಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಎಂಬ ಆದರ್ಶಗಳನ್ನು ಜನಸಾಮಾನ್ಯರ ಬದುಕಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ ಮಾತುಗಳ ಮಟ್ಟಕ್ಕೆ ಸೀಮಿತವಾಗದೇ, ಪ್ರಾಯೋಗಿಕವಾಗಿ ಸಮಾಜಕ್ಕೆ ದಿಕ್ಕು ತೋರಿಸುವ ಕಾರ್ಯಕ್ರಮಗಳಾಗಿ ಹಿಂದು ಸಂಗಮ ರೂಪುಗೊಂಡಿದೆ.


ಈ ಹಿಂದು ಸಂಗಮ ಕಾರ್ಯಕ್ರಮಗಳಿಗಾಗಿ ಕಳೆದ ಕೆಲವು ತಿಂಗಳುಗಳಿಂದ ತಾಲೂಕು ಮಟ್ಟದಲ್ಲಿ ಮಂಡಲ ಮಟ್ಟದಲ್ಲಿ ವ್ಯಾಪಕ ಪೂರ್ವಸಿದ್ದತೆಗಳು ನಡೆಯುತ್ತಿವೆ. ಪ್ರತಿಯೊಂದು ಮಂಡಲದಲ್ಲೂ ಸ್ಥಳೀಯ ಸಮಾಜದ ಬಂಧುಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ತಾಲೂಕು ಆಯೋಜನಾ ಸಮಿತಿಯನ್ನು ಮಂಡಲದಲ್ಲಿ ಮಂಡಲ ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು ವಿವಿಧ ಸಂಘಟನೆಗಳು, ದೈವಸ್ಥಾನ ದೇವಾಲಯಗಳ ಭಜನಾ ಮಂದಿರಗಳ ಪ್ರಮುಖರು, ಸಾಮಾಜಿಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಗಳು ನಡೆದಿವೆ.
ಕಾರ್ಯಕ್ರಮಗಳ ಯಶಸ್ಸಿಗಾಗಿ ಸ್ವಯಂಸೇವಕರ ತಂಡಗಳನ್ನು ರೂಪಿಸಲಾಗಿದ್ದು, ಶಿಸ್ತು, ಸಮಯಪಾಲನೆ ಹಾಗೂ ಸಮನ್ವಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೂ ತಲುವುವಂತೆ ಆಹ್ವಾನ ಕಾರ್ಯ. ಜಾಗೃತಿ ಅಭಿಯಾನಗಳು, ಪ್ರತಿ ಮಂಡಲಗಳಲ್ಲಿ ಮಾತೃ ಸಂಗಮ, ಬೂತ ಬೂತಗಳಲ್ಲಿ ಮನೆ ಮನೆ ಮಹಾ ಸಂಪರ್ಕ ಅಭಿಯಾನ, ಪಟ್ಟಣ ಪ್ರದೇಶಗಳಲ್ಲಿ ಹಿಂದೂ ಸಂಗಮ ಸಂಪರ್ಕ ಯಾತ್ರೆ ಮತ್ತು ವಿವಿಧ ರೀತಿಯಲ್ಲಿ ಸಂಪರ್ಕ ಕಾರ್ಯಗಳು ನಡೆಯುತ್ತಿವೆ. ಹಿಂದು ಸಂಗಮವು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಸಮಾಜದಲ್ಲಿ ದೀರ್ಘಕಾಲೀನ ಸಕಾರಾತ್ಮಕ ಪರಿಣಾಮ ಬೀರುವ ಚಳವಳಿಯಾಗಿ ರೂಪುಗೊಳ್ಳಬೇಕು ಎಂಬ ದೃಷ್ಟಿಯಿಂದ ಪೂರ್ವಭಾವಿ ತಯಾರಿಗಳು ಸಾಗುತ್ತಿವೆ ಎಂದು ತಾಲೂಕು ಸಂಯೋಜಕ ಅನಿಲ್ ಕುಮಾರ್ ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಜಿತ್ ಶೆಟ್ಟಿ ಮಾತನಾಡಿ ಜ.18 ರಿಂದ ಪ್ರಾರಂಭವಾಗಿ ಫೆ.1 ರವರೆಗೆ ಬೆಳ್ತಂಗಡಿ ತಾಲೂಕು ಏಳು ಪ್ರಮುಖ ಮಂಡಲಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಗಳ ವಿವರ: ಬಾರ್ಯ ಮಂಡಲ ಹಿಂದೂ ಸಂಗಮ ಸಭೆಯು ಜ.25ರಂದು, ಬಾರ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ, ಗುರುವಾಯನಕೆರೆಯ ಹಿಂದೂ ಸಂಗಮ ಸಭೆಯು ಜ.18ರಂದು,ಶಕ್ತಿನಗರ ನವಶಕ್ತಿ ಮೈದಾನದಲ್ಲಿ, ಕರಾಯದ ಹಿಂದೂ ಸಂಗಮ ಸಭೆಯು ಫೆ.2ರಂದು ಇಳಂತಿಲ ಗೋಕುಲ ಮೈದಾನದಲ್ಲಿ, ಲಾಯಿಲ ಹಿಂದೂ ಸಂಗಮ ಸಭೆಯು ಫೆ.1ರಂದು ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಠಾರದಲ್ಲಿ, ಮಡಂತ್ಯಾರು ಹಿಂದೂ ಸಂಗಮ ಸಭೆಯು ಜ.25ರಂದು ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನ ಬಸವನಗುಡಿ ವಠಾರದಲ್ಲಿ, ಬಂದಾರು ಮಂಡಲ ಹಿಂದೂ ಸಂಗಮ ಸಭೆಯು ಜ.25ರಂದು ಕೊರಿಂಜ ಉರುವಾಲು ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ, ಬೆಳ್ತಂಗಡಿ ಮಂಡಲ ಹಿಂದೂ ಸಂಗಮ ಸಭೆಯು ಬೆಳ್ತಂಗಡಿ ಸಂತೆಕಟ್ಟೆ ಸಮಾಜಮಂದಿರದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾಯನಕೆರೆ ಮಂಡಲ ಸಂಯೋಜಕ ಚಿದಾನಂದ ಇಡ್ಯಾ, ಬಂದಾರು ಮಂಡಲ ಸಂಯೋಜಕ ಉದಯ್ ಬಿ.ಕೆ, ಮಡಂತ್ಯಾರು ಮಂಡಲ ಸಂಯೋಜಕ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ ವಸಂತ ಮರಕಡ ಸ್ವಾಗತಿಸಿ, ಉಪಾಧ್ಯಕ್ಷೆ ಪ್ರೀತಿ ರಾವ್ ಧನ್ಯವಾದವಿತ್ತರು.









