






ಶಿರ್ಲಾಲು: ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮಹಮ್ಮಾಯಿ ಪೂಜೆ, ದೈವ ಹಾಗೂ ಕೊಡಮಣಿತ್ತಾಯ ನೇಮ ಸಹಿತ ಜ. 4 ರಿಂದ 6ರವರೆಗೆ ಮೂರು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮ ಬೈದರ್ಕಳ ನೇಮ ಹಾಗೂ ಮಾಣಿಬಾಲೆ ನೇಮದೊಂದಿಗೆ ಬೆಳಗಿನ ಜಾವ ಸಂಪನ್ನವಾಯಿತು.
ಜ. 6 ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಮಾತನಾಡಿ, ‘ ಕೋಟಿ ಚೆನ್ನಯರು ತುಳುನಾಡಿನ ಶಕ್ತಿಯಾಗಿದ್ದು, ಅವರ ಕಾರಣಿಕ ವಿಶೇಷವಾದುದು. ವೀರರ ಸಾಧನೆಯ ಕೇಂದ್ರವಾಗಿದ್ದ ಗರಡಿಗಳು ಇಂದು ವೀರರ ಆರಾಧನೆ ಕೇಂದ್ರಗಳಾಗಿವೆ. ಸಂಧಿ ಪಾಡ್ದನಗಳ ಸೂಕ್ಷ್ಮ ವಿಚಾರಗಳು ಜನ ಸಾಮಾನ್ಯರಿಗೆ ತಿಳಿಯಬೇಕಾದ ಅಗತ್ಯವಿದ್ದು, ಅದರ ಅಧ್ಯಯನದ ಶೈಕ್ಷಣಿಕ ಕೇಂದ್ರಗಳಾಗಿ ಗರಡಿಗಳು ಬೆಳೆಯಬೇಕು’ ಎಂದರು.


ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಪುದ್ದರಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ತಾಲ್ಲೂಕು ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ.ಬಂಗೇರ, ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸದಾಶಿವ ಪೂಜಾರಿ ಊರ, ಉದ್ಯಮಿಗಳಾದ ಸುರೇಶ್ ಪೂಜಾರಿ, ಸತೀಶ್ ಪೂಜಾರಿ, ಕೇಶವ ಬರಮೇಲು, ಶಿರ್ಲಾಲು ಸತ್ಯ ಸಾರ ಮುಪ್ಪಣ್ಣ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಬಾಬು ಎರ್ಮತ್ತೋಡಿ, ಗರಡಿಯ ಆಡಳಿತ ಮಂಡಳಿ ಗೌರವಾಧ್ಯಕ್ಷ ರಮಾನಂದ ಪೂಜಾರಿ ಗುಡ್ಡಾಜೆ, ಜಾತ್ರಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಸುದೆಲಾಯಿ ಇದ್ದರು.
ಶಾಸಕ ಹರೀಶ್ ಪೂಂಜ ಹಾಗೂ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಸಂಪತ್ ಬಿ ಸುವರ್ಣ, ಸತೀಶ್ ದೇವಾಡಿಗ ಸುಲ್ಕೇರಿಮೊಗ್ರು, ಜಯವಿಕ್ರಮ ಕಲ್ಲಾಪು, ಕೇಶವ ಪೂಜಾರಿ, ಉಗ್ಗಪ ಪೂಜಾರಿ ಶಾಂತಿನಗರ ಅವರನ್ನು ಸನ್ಮಾನಿಸಲಾಯಿತು. ಸಿಂಚನ ಕರಂಬಾರು ಪ್ರಾರ್ಥಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಂ.ಕೆ. ಸ್ವಾಗತಿಸಿ, ಪ್ರತಾಪ್ ಕಲ್ಲಾಜೆ ವಂದಿಸಿದರು.









