ಅಭ್ಯಾಸ್‌ ಕಾಲೇಜಿಗೆ ಇ.ಒ. ಭವಾನಿ ಶಂಕರ್‌ ಭೇಟಿ-ಪರವಾನಗಿ ಪಡೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಾಸ್ಟೆಲ್‌ ಕಾಮಗಾರಿ ನಡೆಸುವಂತೆ ನಿರ್ದೇಶನ-ಜೂನ್‌ ತಿಂಗಳಲ್ಲೇ ಕಾಮಗಾರಿ ನಿಲ್ಲಿಸಿದ್ದೆವು ಎಂದ ಕಾಲೇಜು ಆಡಳಿತ ಮಂಡಳಿ

0

ಉಜಿರೆ : ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್‌ ಅವರು ಉಜಿರೆಯ ಲಾಯಿಲದ ಕಾಶಿಬೆಟ್ಟುವಿನಲ್ಲಿರುವ ಅಭ್ಯಾಸ್‌ ಕಾಲೇಜಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕಾಲೇಜಿನ ಕೊಳಚೆ ನೀರನ್ನು ಹೊರಗೆ ಹರಿಸಲಾಗುತ್ತಿದೆ, ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಶೇಖರ್‌ ಲಾಯಿಲ ಎಂಬವರು ದೂರು ನೀಡಿದ ಹಿನ್ನೆಲೆಯಲ್ಲಿ ಭವಾನಿ ಶಂಕರ್‌ ಸೋಮವಾರ ಮಧ್ಯಾಹ್ನದ ವೇಳೆ ಕಾಲೇಜಿಗೆ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದರು.

ಕಾಲೇಜಿನಲ್ಲಿ ನಿರ್ಮಾಣ ಮಾಡುತ್ತಿರುವ ಹಾಸ್ಟೆಲ್‌ಗೆ ಸಂಬಂಧಿಸಿದಂತೆ 9/11 ಪ್ರಕ್ರಿಯೆ ಹಾಗೂ ಕಟ್ಟಡ ಪರವಾನಗಿ ಪಡೆದುಕೊಂಡು ಕಾಮಗಾರಿ ಮುಂದುವರಿಸಿ. ಅಲ್ಲಿಯವರೆಗೆ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿ ಎಂದು ಇ.ಒ. ನಿರ್ದೇಶಿಸಿದರು ಎಂದು ಕಾಲೇಜಿನ ಮುಖ್ಯಸ್ಥ ಕಾರ್ತಿಕೇಯ ಎಂ.ಎಸ್.‌ ಅವರು ಸುದ್ದಿ ಬಿಡುಗಡೆ ಜತೆ ಮಾಹಿತಿ ಹಂಚಿಕೊಂಡರು.

ಹಾಸ್ಟೆಲ್‌ ಕಾಮಗಾರಿ ಕೆಲಸವನ್ನು ನಾವು ಲಾಯಿಲ ಪಿಡಿಒ ಅವರ ಸೂಚನೆ ಮೇರೆಗೆ ಜೂನ್‌ ತಿಂಗಳಲ್ಲೇ ನಿಲ್ಲಿಸಿದ್ದೆವು ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಅಭ್ಯಾಸ್‌ ಕಾಲೇಜು ಭೇಟಿ ಬಗ್ಗೆ ಖಚಿತಪಡಿಸಿದ ಇ.ಒ. ಭವಾನಿ ಶಂಕರ್‌ ಅವರು, ಸ್ಥಳ ಪರಿಶೀಲನೆ ನಡೆಸಿ, 2 ಸಣ್ಣ ಕಟ್ಟಡಗಳಿಗೆ ಸಂಬಂಧಿಸಿ ಪರವಾನಗಿ ಪಡೆದುಕೊಂಡು ಕೆಲಸ ಮುಂದುವರಿಸಿ ಎಂದು ತಿಳಿಸಿರುವುದಾಗಿ ಹೇಳಿದರು.

ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ್‌ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಶೇಖರ್‌ ಲಾಯಿಲ ತಮ್ಮ ದೂರಿನಲ್ಲಿ ದಾಖಲು ಮಾಡಿದ್ದರು. ಆದರೆ, ಕಾಲೇಜಿನಲ್ಲಿ 94 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂಬ ಅಧಿಕೃತ ದಾಖಲೆಗಳನ್ನು ಭವಾನಿ ಶಂಕರ್‌ ಅವರ ಜತೆ ಕಾಲೇಜು ಆಡಳಿತ ಮಂಡಳಿ ಹಂಚಿಕೊಂಡಿತು.

ಕಾಲೇಜಿನಲ್ಲಿ 1 ಲಕ್ಷ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾ ಘಟಕ) ನಿರ್ಮಾಣ ಮಾಡಲಾಗುತ್ತಿದ್ದು, ಅದೂ ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ನಮ್ಮ ಕಾಲೇಜಿನಲ್ಲಿ ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಆದರೆ, ಭವಿಷ್ಯದ ದೃಷ್ಟಿಯಿಂದ ಎಸ್‌ಟಿಪಿ ನಿರ್ಮಾಣ ಮಾಡುತ್ತಿದ್ದೇವೆ. ಕಾಲೇಜಿನಲ್ಲಿ ಬಳಕೆಯಾಗಿ ಹೊರ ಹೋಗುವ ನೀರು ಪಿಟ್‌ಗುಂಡಿಗೆ ಹರಿದು ಹೋಗುತ್ತಿದೆ ಎಂದು ಕಾರ್ತಿಕೇಯ ಸುದ್ದಿ ಬಿಡುಗಡೆಗೆ ತಿಳಿಸಿದರು.

ಚರಂಡಿ ನೀರು ಹರಿಯುತ್ತಿದೆ ಎಂದು ಫೋಟೋವೊಂದು ಹರಿದಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕೇಯ ಅವರು, ಅದು ಮಕ್ಕಳು ಊಟ ಮಾಡಿದ ನಂತರ ಕೈ ತೊಳೆದ ನೀರು. ಅದು ಚರಂಡಿ ನೀರಲ್ಲ ಮತ್ತು ದೊಡ್ಡ ಪ್ರಮಾಣದಲ್ಲೂ ಇಲ್ಲ. ಇದು ಕಾಲೇಜು ಜಮೀನಿನ ವ್ಯಾಪ್ತಿಯಲ್ಲೇ ಇದೆ. ಇದರಿಂದ ಸ್ಥಳೀಯರಿಗೆ ಯಾರಿಗೂ ತೊಂದರೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇ.ಒ. ಭವಾನಿ ಶಂಕರ್‌ ಭೇಟಿ ಮಾಡಿದ ವೇಳೆ ಪಿಡಿಒಗಳಾದ ಶ್ರೀನಿವಾಸ್‌ ಮತ್ತು ತಾರನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here