






ಮಡಂತ್ಯಾರು: ಡಿ. 25ರಂದು ಸೇಕ್ರೆಡ್ ಹಾರ್ಟ್ ಚರ್ಚಿನಲ್ಲಿ ಅಂತರ್ ಧರ್ಮೀಯ ಆಯೋಗದ ಮುಂದಾಳತ್ವದಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಚರ್ಚಿನ ಪ್ರಧಾನ ಗುರು ಡಾ. ಸ್ಟ್ಯಾನಿ ಗೋವಿಯಸ್ ಅಲಂಕರಿಸಿ ಸಂದೇಶದಲ್ಲಿ “ಕ್ರಿಸ್ಮಸ್ ಎಂದರೆ ಪ್ರೀತಿ, ಶಾಂತಿ, ಸಂತೋಷ- ಎಲ್ಲರೂ ಪರಸ್ಪರ ಸಹಕಾರದಲ್ಲಿ ಮಗ್ನರಾಗಬೇಕು” ಎಂದು ಹೇಳಿ ಗೀತೆಯ ಮುಖಾಂತರ ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂಡದಬೆಟ್ಟು ಜುಮಾ ಮಸೀದಿಯ ಧರ್ಮ ಗುರು ಕೆ.ಎಂ. ಹನಿಫ್ ಸಖಾಫಿ ಮಾತನಾಡಿ “ಕ್ರೈಸ್ತ ಧರ್ಮ ಸಹನೆ, ಪ್ರೀತಿ ಬೋಧಿಸುತ್ತದೆ, ಹಾಗೇನೆ ಇಸ್ಲಾಂ ಹಾಗೂ ಹಿಂದೂ ಧರ್ಮಗಳು ಬೋಧಿಸುತ್ತವೆ. ಯಾವ ಧರ್ಮವೂ ಸಹ ಕೋಮು-ದ್ವೇಷ ಹೇಳಿಕೊಡುವುದಿಲ್ಲ. ಇಸ್ಲಾಂ ಧರ್ಮದ ಗ್ರಂಥ ಕುರಾನ್ ನಲ್ಲಿ ಇರುವ ಕೆಲವೊಂದು ಸಂದೇಶಗಳು ಭಗವದ್ಗೀತೆ, ಬೈಬಲ್ ನಲ್ಲಿ ಇವೆ. ನಾವು ವಿಷ ಬೀಜದಿಂದ ಹೊರ ಬರಬೇಕು” ಎಂದು ಹೇಳಿದರು.
ಮಡoತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಸಂತ ಬಿ. ಶೆಟ್ಟಿ ಮಾತನಾಡಿ “ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮಗಳು ಹೆಸರಿಗೆ ಮಾತ್ರ ಬೇರೆ ಬೇರೆ, ಆದರೆ ಎಲ್ಲಾ ಧರ್ಮಗಳ ಸಾರ ಒಂದೇ ಆಗಿರುತ್ತದೆ. ಕೃಷ್ಣ ಮತ್ತು ಕ್ರಿಸ್ತರು ಜಗ ಕಲ್ಯಾಣಕ್ಕಾಗಿ ಬಂದವರು. ಇಬ್ಬರೂ ಮಧ್ಯರಾತ್ರಿಯಲ್ಲಿ ಜನಿಸಿದ್ದರು. ಇಬ್ಬರೂ ಬೆಳೆದದ್ದು ಸಾಮಾನ್ಯ ಜನರಲ್ಲಿ. ಕ್ರಿಸ್ತನು ಲೋಕದ ಬೆಳಕು, ನಾವೆಲ್ಲರೂ ಮಾನವೀಯತೆಯನ್ನು ಅರಿತುಕೊಂಡು ಬಾಳಬೇಕು. ಇಂದು ಹಿಂಸೆ ತನ್ನ ರೂಪವನ್ನು ಬದಲಾಯಿಸಿದೆ. ಕ್ರಿಸ್ತನ ಶಾಂತಿ, ಮಾನವ ಪ್ರೀತಿ ಮಗದೊಮ್ಮೆ ಬರುವಂತಾಗಲಿ” ಎಂದು ಹಾರೈಸಿದರು.



ಮುಖ್ಯ ಅತಿಥಿಗಳಿಗೆ ಫಲ- ಪುಷ್ಪ- ಹಾರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಡಂತ್ಯಾರು ಹಾಗೂ ಆಸುಪಾಸಿನ ಊರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಚರ್ಚಿನ ಸಹಾಯಕ ಗುರುಗಳು ಲ್ಯಾರಿ ಫ್ರಾಂಕ್ಲಿನ್ ಪಿಂಟೊ, ಪೂಜ್ಯ ದೀಪಕ್ ಡೇಸಾ, ಧರ್ಮ ಭಗೀನಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ವಾಹನದಲ್ಲಿ ಸ್ತಬ್ಧ ಚಿತ್ರದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಹಾಗೂ ನಂತರ ವಿವಿಧ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮಗಳನ್ನು ನೀಡಲಾಯಿತು. ಕೊನೆಗೆ ಟೈಸನ್ ಡಿಕುನ್ನ ವಿರಚಿತ ನಾಟಕ “ಮುಕ್ಲ್ಯಾನ್ ಯೇಕ್ ಪಾಟ್ಲ್ಯಾನ್ ಯೇಕ್” ಪ್ರದರ್ಶಿಸಲಾಯಿತು.
ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಸ್ ಸ್ವಾಗತಿಸಿದರು. ಕಾರ್ಯದರ್ಶಿ ನೆಲ್ಸನ್ ಲಸ್ರಾದೊ ಹಾಗೂ ಆಯೋಗಗಳ ಸಂಯೋಜಕ ರಿಚರ್ಡ್ ಮೊರಾಸ್ ಮುಖ್ಯ ಅತಿಥಿಗಳ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಎಲ್ಲಾ ಕಾರ್ಯಕ್ರಮವನ್ನು ರೋಬಿನ್ ಸೇರಾ ನಿರ್ವಹಿಸಿದರು. ಅಂತರ್ ಧರ್ಮೀಯ ಆಯೋಗದ ಸಂಚಾಲಕ ಲಿಯೋ ರೊಡ್ರಿಗಸ್ ವಂದಿಸಿದರು.









