ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ-ಶಾಸಕ ಹರೀಶ್ ಪೂಂಜ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗಿ-ಕಟೀಲು ಮೇಳದ ‘ಆಟ’ ಕಣ್ತುಂಬಿಕೊಂಡ ಪ್ರೇಕ್ಷಕರು

0

ಗುರುವಾಯನಕೆರೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಗುರುವಾಯನಕೆರೆ ಶಕ್ತಿನಗರದ ವಿದ್ವತ್ ಪಿಯು ಕಾಲೇಜಿನ ಭವ್ಯ ರಂಗಮಂಟಪದಲ್ಲಿ ಡಿ.20ರಂದು ನಡೆದ ಸಂಪೂರ್ಣ ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಜನೆಗಾಗಿ ಬಂದು ವಿದ್ವತ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಾಗೂ ಮಕ್ಕಳಿಗೆ ಕರಾವಳಿಯ ವಿಶಿಷ್ಟ ದೈವಿಕ ಕಲೆ, ಸಂಸ್ಕೃತಿಯನ್ನು ಪರಿಚಯಿಸಲು ಕಾಲೇಜಿನ ಆವರಣದಲ್ಲಿ ಯಕ್ಷಗಾನವನ್ನು ಆಯೋಜಿಸಲಾಗಿತ್ತು. ಸಂಜೆ ಚೌಕಿ ಪೂಜೆ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಬಳಿಕ ಆಗಮಿಸಿದ ಯಕ್ಷಭಿಮಾನಿಗಳಿಗೆ, ಇತರರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಾಸಕ ಹರೀಶ್ ಪೂಂಜ, ಕುವೆಟ್ಟು ಗ್ರಾ.ಪಂ‌ ಅದ್ಯಕ್ಷೆ ಭಾರತಿ ಶೆಟ್ಟಿ, ವಿಜಯ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಉಜಿರೆ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ,ಬಳಂಜ ಗ್ರಾ.ಪಂ ಪಿಡಿಓ ಶಶಿಕಲಾ, ಮೆಸ್ಕಾಂ ಇಂಜಿನಿಯರ್ ಬೂಬ ಶೆಟ್ಟಿ, ಶ್ರೀ ಕ್ಷೇತ್ರ ಕಟೀಲು ಇದರ ಆಡಳಿತ ಮಂಡಳಿ ಸದಸ್ಯರಾದ ಬಿಪಿನ್ ಶೆಟ್ಟಿ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಅಭ್ಯಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಾರ್ತೀಕೇಯ, ಕುಂಭಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಿರೀಶ್ ಕುಮಾರ್, ಜಿ.ಪಂ‌ ಮಾಜಿ ಸದಸ್ಯೆ ಮಮತಾ ಎಂ ಶೆಟ್ಟಿ, ಶಿರ್ಲಾಲು ಸಿಎ ಬ್ಯಾಂಕ್ ನಿವೃತ್ತ ಸಿಇಓ ನಿತ್ಯಾನಂದ ಶೆಟ್ಟಿ ನೊಚ್ಚ, ಮೈಟ್ ಪ್ರೊಪೇಸರ್ ರಂಜಿತ್ ಹೆಚ್.ಡಿ,ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಸಂಪಾದಕ ಬಿ.ಎಸ್ ಕುಲಾಲ್, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

ವಿದ್ವತ್ ಪಿಯು ಕಾಲೇಜಿನ ಚೇರ್ಮನ್ ಸುಭಾಶ್ಚಂದ್ರ ಶೆಟ್ಟಿ, ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ರಾಧಾಕೃಷ್ಣ ರೈ, ಪ್ರಜ್ವಲ್ ರೈ, ಕಾಶಿನಾಥ್ ಕೆ, ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಗಂಗಾಧರ ಮಂಡಗಳಲೆ, ಆಡಳಿತಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಪ್ರಾಂಶುಪಾಲ ಹರೀಶ್ ಕೆ.ಆರ್. ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿದರು.

ಸಂಸ್ಥೆಯ ಉಪನ್ಯಾಸಕ ವೃಂದದವರು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಭಾಗಿಯಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ಸಹಕರಿಸಿದರು.

‍ಶಿಸ್ತಿನ ಅಚ್ಚುಕಟ್ಟಾದ ವ್ಯವಸ್ಥೆ ಕಾಲೇಜಿನಲ್ಲಿ ನಡೆಯುವ ಯಕ್ಷಗಾನವನ್ನು‌ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದು, ಗಮನಸೆಳೆಯಿತು. ಯಕ್ಷಾಭಿಮಾನಿಗಳಿಗೆ ಉತ್ತಮ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ತೆರೆದ ಭವ್ಯ ರಂಗ ಮಂಟಪದಲ್ಲಿ ‌ಯಕ್ಷಗಾನ ಪ್ರದರ್ಶನಗೊಂಡು ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಕಣ್ತುಂಬಿಗೊಂಡರು. ನೂರಾರು‌ ಸಂಖ್ಯೆಯಲ್ಲಿ ಸಮಾಜದ ಪ್ರಮುಖರು, ಉಪನ್ಯಾಸಕರು, ವಿವಿಧ ಕ್ಷೇತ್ರದ ಗಣ್ಯರು, ಸ್ಥಳಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here