






ಬೆಳ್ತಂಗಡಿ: ದಲಿತರ ಶಿಕ್ಷಣ ಮತ್ತು ಭೂ ಹಕ್ಕೊತ್ತಾಯ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ಡಿ.23ರಂದು ದಲಿತರಿಂದ ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಬಾಬು ಎ. ತಿಳಿಸಿದ್ದಾರೆ.
ಡಿ.20ರಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾ ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ಅಯ್ಯಪ್ಪ ಗುಡಿಯ ಬಳಿಯಿಂದ ಹೊರಡಲಿದೆ. ಬಳಿಕ ಸಿವಿಸಿ ಹಾಲ್ನಲ್ಲಿ ಸಮಾವೇಶ ನಡೆಯಲಿದೆ.


ಪ.ಜಾತಿ ಮತ್ತು ಪ.ಪಂಗಡದ ಪ್ರತಿ ಕುಟುಂಬಕ್ಕೆ ಲಭ್ಯ ಇರುವ ಸರಕಾರಿ ಭೂಮಿಯಲ್ಲಿ ಕನಿಷ್ಟ ಒಂದು ಎಕರೆ ಭೂಮಿ ನೀಡಬೇಕು. ಭೂ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬಂದಿ ಪೈಕಿ ಶೇ. 20 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ನೇಮಕ ಮಾಡಬೇಕು. ದಲಿತರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಸಮಾವೇಶ ನಡೆಯಲಿದೆ. ಚಿಂತಕ ಲಕ್ಷ್ಮೀಶ ತೋಳಾಡಿ, ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ| ನರೇಂದ್ರ ನಾಯಕ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್, ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ ರಾಜಗೋಪಾಲ್ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ನಾಗರಿಕ ಸೇವಾ ಟ್ರಸ್ಟ್ನ ಸಂಚಾಲಕ ಕೆ. ಸೋಮನಾಥ ನಾಯಕ್ ಮಾತನಾಡಿ, ಮಾಹಿತಿ ಹಕ್ಕಿನಲ್ಲಿ ಕೊಕ್ಕಡ, ಬೆಳ್ತಂಗಡಿ, ವೇಣೂರು 3 ಫಿರ್ಕಾದ ಕಂದಾಯ ನಿರೀಕ್ಷರು ನೀಡಿದ ಮಾಹಿತಿ ಪ್ರಕಾರ 81 ಗ್ರಾಮಗಳಲ್ಲಿ ಒಟ್ಟು 1,43,191.01 ಎಕರೆ ಸರಕಾರಿ ಭೂಮಿಯಲ್ಲಿ ಕುಮ್ಮಿ ಡೀಮ್ಸ್ ಫಾರೆಸ್ಟ್ ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಿದ 94 ಸಿ ಮತ್ತು ನಮೂನೆ 57,53, ಸಾಗುವಳಿ ಜಮೀನು ಇತ್ಯಾದಿ ಸುಮಾರು 7ರಿಂದ 10 ಸಾವಿರ ಎಕರೆ ಭೂಮಿ ಲಭ್ಯ ಇರುವುದಾಗಿ ಅಂದಾಜಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ 473 ಎಕರೆ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ಹಂಚಬೇಕು ಎಂದರು. ಸಹ ಸಂಚಾಲಕರಾದ ಸುಕೇಶ್ ಮಾಲಾಡಿ, ಎಂ.ಬಿ. ಕರಿಯ, ನಾರಾಯಣ ಕಿಲಂಗೋಡಿ ಉಪಸ್ಥಿತರಿದ್ದರು.








