ಕಳಿಯ: ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ-ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡಬೇಕು: ಕಳಿಯ ಗ್ರಾಮಸ್ಥರ ಆಗ್ರಹ

0

ಬೆಳ್ತಂಗಡಿ: ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಜನರ ಬಳಿಗೆ ಬಂದು ನಿರ್ವಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. ರಾಜ್ಯದ ಮೊದಲ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೇವೆ  ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಡಿ.20 ರಂದು ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಳಿಯ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡಬೇಕು: ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡಬೇಕು ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇದರ ಬಗ್ಗೆ ನಾನು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ರಸ್ತೆ ದುರಸ್ತಿ ಮಾಡಬೇಕು: ಗ್ರಾಮಸ್ಥ ದಿನೇಶ್ ಮಾತನಾಡಿ ಕಳಿಯ ಗ್ರಾಮದ ಎರುಕಡಪು ಅಂಗನವಾಡಿ ಕೇಂದ್ರವನ್ನು ಸಂಪರ್ಕಿಸುವ 150 ಮೀಟರ್ ರಸ್ತೆಯು ಹಲವಾರು ವರುಷದ ಇತಿಹಾಸ ಹೊಂದಿದ್ದು ತೀರ ಹದಗೆಟ್ಟು ನಾದುರಸ್ಥಿ ಸ್ಥಿತಿಯಲ್ಲಿರುತ್ತದೆ. ಸಾರ್ವಜನಿಕರು ಹಾಗೂ ಪುಟಾಣಿ ಮಕ್ಕಳು ಅಂಗನವಾಡಿ ಕೇಂದ್ರ ಈ ಕುರಿತು ರಸ್ತೆ ದುರಸ್ಥಿಗೆ ಸಂಬಂಧ ಪಟ್ಟಂತೆ ಸಂಪರ್ಕಿಸಲು ನರಕಯಾತನೆ ಪಡುವಂತಾಗಿದೆ ಹಲವಾರು ಬಾರಿ ಕಳಿಯ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದು ಇಲ್ಲಿಯ ವರೆಗೆ ಸಮಸ್ಯೆ ಬಗೆಹರಿದಿರುವುದಿಲ್ಲ ಇದರಿಂದ ಸಾರ್ವಜನಿಕರು ಹತಾಶೆಗೊಂಡಿರುತ್ತಾರೆ.

ಆದರೆ ತಮ್ಮ ಉತ್ತಮ ಯೋಜನೆಯಾದ ಜನಸ್ಪಂದನಾ ಕಾರ್ಯಕ್ರಮದಿಂದ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದೆಂಬ ಬಹು ದೊಡ್ಡ ನಿರೀಕ್ಷೆಯೊಂದಿಗೆ ಕೊನೆಯ ಬಾರಿ ಈ ಮನವಿ ಮಾಡುತ್ತೇವೆ. ತಮ್ಮ ಅಧಿಕಾರವದಿಯಲ್ಲಿ ಹೆಚ್ಚಿನ ಯೋಜನೆಗಳು ಅನುಷ್ಠಾನಗೊಂಡಿದ್ದು ಇತರ ತಾಲೂಕಿಗೆ ಮಾದರಿಯಾಗಿರುವುದು ನಮಗೆ ಸಂತೋಷವಾಗಿದೆ. ಅಂತೆಯೇ ಅಭಿವೃದ್ಧಿಯ ಮೂಲಕ ಬೆಳ್ತಂಗಡಿಯ ಚಿತ್ರಣವನ್ನೇ ಉತ್ತಮ ರೀತಿಯಲ್ಲಿ ಬದಲಾವಣೆ ಮಾಡುತ್ತಿರುವ ತಾವುಗಳು ದಯಮಾಡಿ ನಮ್ಮ ಸಮಸ್ಯೆಗೆ ಇಂತಹ ಉತ್ತಮ ಕಾರ್ಯಕ್ರಮದಡಿ ಶಾಶ್ವತ ಪರಿಹಾರ ಒದಗಿಸಿ ಗ್ರಾಮಸ್ಥರ ಹಾಗೂ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಕಳೆದ ಅವಧಿಯಲ್ಲಿ ಕಳಿಯ ಗ್ರಾಮ ಪಂಚಾಯತ್ ಗೆ 21 ಕೋಟಿ ರೂಪಾಯಿ ಅನುದಾನ ಒದಗಿಸಿ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ ಆದರೆ ಇಂದು ಸರ್ಕಾರದಿಂದ ಅಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ದೊರೆಯುತ್ತಿಲ್ಲ ಎಂದು ಶಾಸಕರು ಬೇಸರಿಸಿದರು.  ಸದ್ರಿ ರಸ್ತೆಯ ಜಾಗದ ವಿಚಾರವಾಗಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸುವಂತೆ ಶಾಸಕರು ಸೂಚಿಸಿದರು.

ಅರಣ್ಯ ಇಲಾಖೆ 183 ಎಕ್ರೆ ಭೂಮಿಯನ್ನು ಇಲಾಖೆ 17 ನೋಟಿಫಿಕೇಶನ್ ಮಾಡಲು ಮುಂದಾಗಿದೆ ಇದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗಲಿದೆ.  ಅರಣ್ಯ ಇಲಾಖೆ ಜನರಿಗೆ ಯಾವುದೇ ನೋಟಿಸ್ ನೀಡದೆ ಸರ್ವೇ ನಡೆಸಿದೆ ಇದರ ಪರಿಣಾಮ ಕೆಲವು ಮನೆಗಳ ಅಂಗಳದವರೆಗೂ ಸರ್ವೇ ನಡೆಸಿರುವುದು ಖಂಡನೀಯ ಎಂದು ಗ್ರಾಮಸ್ಥರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅರಣ್ಯ ಇಲಾಖೆ – ಕಂದಾಯ ಇಲಾಖೆಯ ಭೂಮಿಯ ಗೊಂದಲದ ಕುರಿತು ಐಬಿಯಲ್ಲಿ ತಹಶೀಲ್ದಾರ್ ಆರ್ ಎಫ್ ಓ , ಗ್ರಾಮ ಪಂಚಾಯತ್ , ನಾಗರೀಕರ ಜೊತೆ ನಾನು ಜನವರಿಯಲ್ಲಿ ವಿಶೇಷ ಸಭೆ ನಡೆಸಲಾಗುವುದು ಎಂದು ಶಾಸಕರು ಹೇಳಿದರು.

ಅರಣ್ಯ ಇಲಾಖೆಯ ಜಾಗದ ವಿಚಾರದಲ್ಲಿ ನನ್ನ ಮೇಲೆ ಎರಡು ದೂರು ದಾಖಲಾಗಿದೆ. ರೆಖ್ಯಾದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದಾಗ ಹೆಚ್ಚುವರಿ ಭೂಮಿ ದೊರೆತಿದೆ. ಇದಕ್ಕೆ ಸರ್ಕಾರದಲ್ಲಿ ಅನುಮೋದನೆ ನೀಡಿದರೆ ರಾಜ್ಯದ ನಾನಾ ಭಾಗಗಳ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗುತ್ತದೆ‌ ಎಂದು ಶಾಸಕರು ಹೇಳಿದರು.

ಗಡಿ ಗುರುತು ಮಾಡಬೇಕು: ಗೋವಿಂದೂರು ಬಳಿ ಏತ ನೀರಾವರಿ ಯೋಜನೆಯ  ಪೈಪ್ ಲೈನ್ ಕಾಮಗಾರಿಗೆ ಅರಣ್ಯ ಇಲಾಖೆಯ ತಡೆ ಬಂದಿದೆ ಇದನ್ನು ಶೀಘ್ರವೇ ಸರಿಪಡಿಸಬೇಕು ಎಂದು ಗ್ರಾಮಸ್ಥರು ಹೇಳಿದರು.  ಈ ಕುರಿತು ಎಫ್ ಸಿಗೆ‌ ಸಲ್ಲಿಸಿರುವುದಾಗಿ ಅರಣ್ಯಾಧಿಕಾರಿ ತಿಳಿಸಿದರು. 235‌ ಸರ್ವೇ ನಂಬರ್ 30 ಸೆಂಟ್ಸ್ ಜಾಗವನ್ನು ಗಡಿ ಗುರುತು ಮಾಡಿ ಆರೋಗ್ಯ ಇಲಾಖೆಗೆ ನೀಡಬೇಕು ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ, ಉಪಾಧ್ಯಕ್ಷೆ ಇಂದಿರಾ ಬಿ. ಶೆಟ್ಟಿ, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಂಞ ಕೆ., ಸದಸ್ಯರು, ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here