ಎಸ್.ಡಿ.ಎಂ ಪ.ಪೂರ್ವ ಕಾಲೇಜು: ಶೈಕ್ಷಣಿಕ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ- ‘ಪುರಸ್ಕಾರ್- 2025’: ವಿದ್ಯಾರ್ಥಿಗಳ ಯಶಸ್ಸಿಗೆ ಮೂಲ ಆಧಾರ ಶಿಸ್ತು ದೃಢತೆ ಮತ್ತು ಶ್ರದ್ಧೆ : ಡಾ. ನವೀನ್ ಶೆಟ್ಟಿ ಕೆ.

0

ಉಜಿರೆ: ಧನಾತ್ಮಕ ಚಿಂತನೆಗಳು ನಮ್ಮೊಳಗೆ‌ ಹೊಸ ಬದಲಾವಣೆಗಳನ್ನು ಮೂಡಿಸುತ್ತಿದೆ. ಅವಕಾಶಗಳನ್ನು ಸಕ್ರೀಯವಾಗಿ ಬಳಸಿಕೊಂಡಾಗ ನಮ್ಮ ಪ್ರಯತ್ನ ಮತ್ತು ಕನಸುಗಳು ಫಲದಾಯಕವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿದ್ಯಾರ್ಥಿಗಳ ಯಶಸ್ಸಿಗೆ‌ ಮೂಲ ಅಡಿಪಾಯ ಶಿಸ್ತು ಮತ್ತು ಶ್ರದ್ಧೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಹಾಗು ಮಂಗಳೂರಿನ ನಂತೂರು ಎನ್.ಎಸ್.ಎ.ಎಮ್ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಅಭಿಪ್ರಾಯಪಟ್ಟರು.

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ‘ಪುರಸ್ಕಾರ್ – 2025’ ಶೈಕ್ಷಣಿಕ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪೋಷಕರು ಹಾಗು ಗುರು ಹಿರಿಯರ ಆರ್ಶಿವಾದ ಮತ್ತು ಮಾರ್ಗದರ್ಶನ ನಮ್ಮ ಪ್ರತಿ ಹೆಜ್ಜೆಗಳಲ್ಲಿ ಅತ್ಯಂತ ಅವಶ್ಯ. ನಾವು ಸವಾಲುಗಳನ್ನು ಸ್ವೀಕರಿಸುವಂತವರಾದಾಗ ಅದು ಹೊಸ ಪಾಠ ಮತ್ತು ಅನುಭವಗಳು ನಮ್ಮದಾಗಿಸುತ್ತದೆ ಜೊತೆಗೆ ನಮ ಆತ್ಮ ವಿಶ್ವಾಸವನ್ನು ವೃದ್ಧಿಸುತ್ತದೆ. ವಿದ್ಯಾರ್ಥಿ ಜೀವನದಿಂದಲೇ ವಿನಯತೆ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಈ ಸಮಾಜಕ್ಕೆ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮತ್ತೊರ್ವ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣಗಳು , ಪಠ್ಯದ ಜೊತೆಗೆ ಜೀವನ ಶಿಕ್ಷಣವನ್ನು ಕಲಿಸಿಕೊಡುವ ನಿರಂತರ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸ್ಪಷ್ಟ ಪಡಿಸಿಕೊಂಡು, ಅದಕ್ಕನುಗುಣವಾಗಿ ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಬೇಕು. ನಕಾರಾತ್ಮಕ ಆಕರ್ಷಣೆಗಳಿಗೆ ಒಳಗಾಗದೆ ನಮ್ಮ ಗುರಿಯನ್ನು ಬೆನ್ನತ್ತುವ ಮೂಲಕ ಯಶಸ್ಸಿನ ತುದಿಯನ್ನು ತಲುಪುವುದು ನಮ್ಮೆಲ್ಲರ ಧ್ಯೇಯವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಇರುತ್ತದೆ. ಇದು ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೂ ಪೂರಕವಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಹಾಗು ಕೌಶಲ್ಯವನ್ನು ಬೆಳೆಸಿ ಪ್ರೋತ್ಸಾಹಿಸುವ ಎಲ್ಲಾ ವ್ಯವಹಾರಗಳನ್ನು ಎಸ್.ಡಿ.ಎಂ ಸಂಸ್ಥೆ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳ ಸಾಧನೆ ಬದುಕಿನುದ್ದಕ್ಕೂ ನಿರಂತರವಾಗಿರಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಬಳಿಕ ಶೈಕ್ಷಣಿಕ ಸಾಲಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಜಿಲ್ಲಾ ಹಾಗು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಸಾಧನೆಗೈದ ಮತ್ತು ಕಾಲೇಜಿನಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಪ್ರಶಸ್ತಿಯನ್ನು ಅತಿಥಿಗಳಾದ ಡಾ. ನವೀನ್ ಶೆಟ್ಟಿ ಕೆ , ಪ್ರೊ. ವಿಶ್ವನಾಥ್ ಪಿ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಶಿಕ್ಷಕರ ಸಂಘದ ವಿವಿಧ ವಿಭಾಗಳ ಸದಸ್ಯತ್ವಕ್ಕೆ ಆಯ್ಕೆಯಾಗಿರುವ ಸಾಧಕ ಉಪನ್ಯಾಸಕರಾದ ಡಾ. ಪ್ರಸನ್ನ ಕುಮಾರ್ ಐತಾಳ್, ರಾಜು ಎ ಎ, ಅಂಕಿತಾ ಎಂ.ಕೆ , ಲಕ್ಷೀಶ್ ಭಟ್ ರವರಿಗೆ ಅತಿಥಿಗಳಾದ ಡಾ. ನವೀನ್ ಶೆಟ್ಟಿ ಕೆ. ಅಭಿನಂದಿಸಿದರು. ಬಳಿಕ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಾಗು ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ವತಿಯಿಂದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ, ಡಾ. ನವೀನ್ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್, ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿಶ್ವನಾಥ್ ಪಿ, ಡಾ. ರಾಜೇಶ್ ಬಿ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕ ಡಾ. ಮಹಾವೀರ ಜೈನ್ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಕುಮಾರಿ ನಿಜ ಕುಲಾಲ್ ಹಾಗೂ ಕುಮಾರಿ ಮೌಲ್ಯ ನಿರೂಪಿಸಿ, ಉಪನ್ಯಾಸಕಿ ನಿಹಾರಿಕ ಜಿ. ಎನ್. ವಂದಿಸಿದರು.

LEAVE A REPLY

Please enter your comment!
Please enter your name here