




ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆಗಳನ್ನು ತನಿಖೆ ಮಾಡಲು ಸರಕಾರ ಎಸ್ಐಟಿ ರಚನೆ ಮಾಡಿದ್ದು, ಆದರೆ ಮೀಡಿಯಾಗಳು ಷಡ್ಯಂತ್ರ್ಯ ರೂಪಿಸಿ ಅದನ್ನು ಹಾಳು ಮಾಡಲು ನೋಡುತ್ತಿದ್ದಾರೆ. ಆದರೂ ಇದೆಲ್ಲಕ್ಕೂ ಉತ್ತರ ಮಹಾಲಿಂಗೇಶ್ವರ ದೇವರು ಮತ್ತು ಮಂಜುನಾಥ ಸ್ವಾಮಿ ಕೊಡುತ್ತಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.


ಈ ಹಿಂದೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಆದೇಶವಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಹೈಕೋರ್ಟ್ ನಿರ್ದೇಶನದಂತೆ ಪುತ್ತೂರು ಎಸಿಯವರು ಮತ್ತೆ ಗಡಿಪಾರು ನೋಟೀಸ್ ಜಾರಿ ಮಾಡಿದ್ದರು. ಈ ಕುರಿತು ಅವರು ಡಿ.8ರಂದು ಪುತ್ತೂರು ಎಸಿ ಕೋರ್ಟ್ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ತುಪ್ಪ ದೀಪ, ಎಳ್ಳೆಣ್ಣೆ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಿದರು.
ಜಿಲ್ಲೆಯಿಂದ ಗಡಿಪಾರು ಮಾಡುವ ಸುಳ್ಳು ಆರೋಪ ಹೊರಿಸಿ, ಮುಖ್ಯವಾಗಿ ಮೀಡಿಯಾಗಳು ಷಡ್ಯಂತ್ರ್ಯ ಮಾಡಿದ್ದು ಎಂದು ಆರೋಪಿಸಿದ ಅವರು ಪ್ರಥಮವಾಗಿ ರಾಜಕೀಯದವರು, ಮೀಡಿಯಾದವರಿರಬಹುದು.
ಯಾರಾರೂ ಅತ್ಯಾಚಾರಿಗಳ ಜೊತೆ ಇದ್ದಾರೋ ತಿಳಿದು ಮಾಡಿದ ತಪ್ಪಿಗೆ ಈ ಮಹಾಲಿಂಗೇಶ್ವರ ದೇವರೆ ಶಿಕ್ಷೆ ಕೊಡಬೇಕು. ನಾನು 14 ವರ್ಷದಿಂದ ಸೌಜನ್ಯ ಪರ ಹೋರಾಟ ಮಾಡುತ್ತಿದ್ದೇನೆ. ಏನೆಲ್ಲಾ ಆರೋಪ ಮಾಡಿದ್ದೇನೋ ಅದೆಲ್ಲವೂ ಮಹಾಲಿಂಗೇಶ್ವರ, ಮಂಜುನಾಥ ಸ್ವಾಮಿಗೆ ಗೊತ್ತಿದೆ. ನಾನು ಹೇಳಿದ್ದು ಸತ್ಯವೇ. ಅಲ್ಲಿ ಅತ್ಯಾಚಾರ ಆಗಿರುವುದು, ದೀನ ದಲಿತರ ಭೂಮಿ ಒಳಗೆ ಹಾಕಿರುವುದು, ಬಡ್ಡಿ ವ್ಯವಹಾರ ಮಾಡಿದ್ದು ಹೌದು. ಇದಕ್ಕೆ ಶಿಕ್ಷೆ ಆಗಲೇಬೇಕು. ಈ ಕಾರ್ಯಾಂಗದ ವ್ಯವಸ್ಥೆಯಲ್ಲಿ ನ್ಯಾಯ ಸಿಗದಿದ್ದರೂ ಕೂಡಾ ಈ ಮಹಾಲಿಂಗೇಶ್ವರ ದೇವರ ಮತ್ತು ಧರ್ಮಸ್ಥಳ ಮಂಜುನಾಥ ದೇವರ ಮತ್ತು ಅಣ್ಣಪ್ಪ ಸ್ವಾಮಿಯ ನ್ಯಾಯಾಲಯದಲ್ಲಿ ನ್ಯಾಯ ಸಿಗಲೇಬೇಕು ಎಂದು ಹೇಳಿದರು.









