




ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಗ್ಲಿಷ್ ಮಾಧ್ಯಮ ಶಾಲೆ (CBSE, ನವದೆಹಲಿಗೆ ಸಂಯೋಜಿತ) ಮತ್ತು ಎಐಸಿಎಸ್, ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳ ಸಂಘದ ಸಹಯೋಗದಲ್ಲಿ ಉಜಿರೆ ಎಸ್.ಡಿ.ಎಂ ಸಂಸ್ಥೆಯ ಈಜುಕೊಳದಲ್ಲಿ ‘SPLASH – 2025’ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಂತರ್ ಜಿಲ್ಲಾ ಈಜು ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಸ್ಪರ್ಧೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಈಜು ಒಂದು ವಿಶೇಷ ಕೌಶಲ್ಯ, ಹದಿಹರೆಯದಿಂದಲೇ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೊಸ ಹೊಸ ಅನುಭವಗಳು ನಮಗಾಗುತ್ತವೆ. ಇದು ನಮ್ಮ ಆತ್ಮ ವಿಶ್ವಾಸ ಮತ್ತು ಮನೋಬಲವನ್ನು ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಉನ್ನತ ಮಟ್ಟದಲ್ಲಿ ಸಾಧಿಸಲು ಇಂತಹ ಸ್ಪರ್ಧೆಗಳು ಅಡಿಪಾಯವನ್ನು ರೂಪಿಸುತ್ತದೆ ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮತ್ತೊರ್ವ ಅಭ್ಯಾಗತರಾಗಿದ್ದ ಸಂತ ಅಲೋಶಿಯಸ್ ಕಾಲೇಜಿನ ಈಜು ತರಬೇತುದಾರ ನವೀನ್ ಮಾತನಾಡಿ, ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನು ಸಮಾನವಾಗಿ ಕಾಣುತ್ತ ಮುಂದೆ ಸಾಗಬೇಕು. ಸತತ ಪ್ರಯತ್ನ ಮತ್ತು ಉತ್ಸಾಹದಿಂದ ಯಶಸ್ಸಿನ ಗುರಿ ತಲುಪಬವುದು. ಈಜು ಕೇವಲ ಸ್ಪರ್ಧೆಗೆ ಸೀಮಿತವಾಗದೆ ಇದೊಂದು ನಮ್ಮ ಜೀವ ರಕ್ಷಿಸುವ ಕಲೆ. ಇದನ್ನು ಎಲ್ಲರು ರೂಡಿಸಿಕೊಳ್ಳಬೇಕು ಎಂದರು.


ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ, ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ (CBSE, ನವದೆಹಲಿಗೆ ಸಂಯೋಜಿತ) ಪ್ರಾಂಶುಪಾಲ ಮನಮೋಹನ್ ನಾಯ್ಕ್, ಕ್ಷೇಮ ಪಾಲನ ಅಧಿಕಾರಿ ಧಾನ್ಯ ಕುಮಾರ್, ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ತೀರ್ಪುಗಾರರು, ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಸ್ಪರ್ಧಾಳುಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಾಲೆಯ ಆಂಗ್ಲ ಭಾಷಾ ಅಧ್ಯಾಪಕಿ ನೀತು ಪ್ರಸಾದ್ ನಿರೂಪಿಸಿ, ವಂದಿಸಿದರು.
200 ಕ್ಕೂ ಅಧಿಕ ಸ್ಪರ್ಧಾಗಳು ಭಾಗಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅಂತರ್ ಜಿಲ್ಲಾ ಈಜು ಸ್ಪರ್ಧೆಯಲ್ಲಿ, ಎರಡು ವಿಭಾಗಳಲ್ಲಿ ಬಾಲಕ ಬಾಲಕಿಯರ 14 ರ ವಯೋಮಿತಿ ಮತ್ತು 16ರ ವಯೋಮಿತಿಯ 6 ರೀತಿಯ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎರಡು ಜಿಲ್ಲೆಯ ಸುಮಾರು 20 ಶಾಲೆಗಳಿಂದ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗಿದೆ. ಇದರ ಭಾಗವಾಗಿ ಶಾಲಾ – ಕಾಲೇಜಿನ ಆವರಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಈಜುಕೊಳವನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.
,









