ಎಸ್.ಡಿ.ಎಂ ಪ.ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ-ಡಾ. ಹೆಗ್ಗಡೆಯವರ ಜನ್ಮ ದಿನ ಪ್ರಯುಕ್ತ 30 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ-ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಉಜಿರೆ: ಎಸ್.ಡಿ‌.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆಯ ಪ್ರಯುಕ್ತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನ.25ರಂದು ನಡೆಯಿತು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದ ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಮಾತನಾಡಿ, ಪ್ರಯತ್ನ, ತ್ಯಾಗ, ದೃಢತೆ ಮತ್ತು ಧೈರ್ಯವೆಂಬ ತತ್ವಗಳನ್ನು ನಾವು ವಿದ್ಯಾರ್ಥಿ ಜೀವನದಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ಅದು ನಮಗೆ ಭವಿಷ್ಯದಲ್ಲಿ ಪ್ರತಿಫಲ ನೀಡುತ್ತದೆ. ಓದು ಹವ್ಯಾಸಗಳ ಜೊತೆಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಾಗ ನಮ್ಮ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ವಿನಯತೆ ಮತ್ತು ಸಂಸ್ಕಾರವನ್ನು ಸದಾ ಕಾಪಾಡಿಕೊಳ್ಳಬೇಕು. ಅಂತಹ ಸಂಸ್ಕೃತಿ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಸಹಜವಾಗಿ ಕಲಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಂಪಾಜೆಯ ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಮಾತನಾಡಿ , ಧನಾತ್ಮಕ ಬೆಳವಣಿಗೆಗಳು ವಿದ್ಯಾರ್ಥಿಗಳಿಗೆ ಅತಿ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಗೆ ಭಿನ್ನ ಆತ ತನ್ನದೇ ಆದ ಪ್ರತಿಭೆ ಮತ್ತು ಕೌಶಲ್ಯಗಳು ಹೊಂದಿರುತ್ತಾನೆ. ಅದನ್ನು ಸಕಾರಾತ್ಮಕ ಚಿಂತನೆಗಳೊಂದಿಗೆ ಯಶಸ್ಸಿನ ಹಾದಿಗೆ ಸಾಗಿಸಬೇಕು. ವಿದ್ಯಾರ್ಥಿಗಳು ನೈತಿಕತೆ ಮತ್ತು ಅನೈತಿಕತೆಯ ಅಂತರವನ್ನು ಅರಿತುಕೊಂಡು ನಾನು ಸರಿ ನೀನು ಸರಿ, ನಾನು ನಿನ್ನನ್ನು ಗೌರವಿಸುತ್ತೇನೆ, ನಾನು ನನ್ನ ಕೆಲಸ ಮಾಡುತ್ತೇನೆ, ನೀನು ನಿನ್ನ ಕೆಲಸ ಮಾಡು ಎಂಬ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬದುಕಬೇಕು. ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ, ಅಂತಹ ಜ್ಞಾನ ಪರಂಪರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು ಪೋಷಿಸಿ, ಬೆಳೆಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಜಿರೆಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಜೀವನ ಮತ್ತು ಸಾಧನೆಯ ಕುರಿತಾದ ಶಿಕ್ಷಕಿ ಉಷಾ ರಚಿಸಿರುವ ಹಾಡನ್ನು ವಿದ್ಯಾರ್ಥಿಗಳು ಹಾಡಿದರು. ಕಾಲೇಜಿನ ವಿದ್ಯಾರ್ಥಿಗಳಾದ ಅಂಸಿನಿ ಭೀಡೆ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗಡೆಯವರಿಗೆ ಜನ್ಮದಿನದ ಶುಭಾಶಯವನ್ನು ಕೋರಿದರು. ಪೂಜ್ಯ ಕಾವಂದರು ಸ್ಥಾಪಿಸಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಉದ್ದೇಶ ಮತ್ತು ಆಶಯ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ತಲುಪಿಸುವುದು ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವುದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಸದಾ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಇದೇ ಕಾರ್ಯಕ್ರಮದ ಭಾಗವಾಗಿ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉಜಿರೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಇವರ ಸಯುಕ್ತ ಆಶ್ರಯದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರಿಂದ “ಸ್ವಚ್ಛ ಉಜಿರೆ – ಸ್ವಸ್ಥ ಉಜಿರೆ” ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸಂಸ್ಥೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕರಾದ ಮಹಾವೀರ್ ಜೈನ್ ನಿರೂಪಿಸಿ, ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ. ವಂದಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ : 2024- 25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ , ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಎಸ್.ಡಿ.ಎಂ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಸಾಧಕ ವಿದ್ಯಾರ್ಥಿಗಳಾದ ತುಷಾರ (ವಿಜ್ಞಾನ ವಿಭಾಗ), ನೀತಿ (ವಿಜ್ಞಾನ ವಿಭಾಗ), ಆರ್ಯ ದಿನೇಶ್ (ವಾಣಿಜ್ಯ ವಿಭಾಗ), ಅನನ್ಯಾ (ವಾಣಿಜ್ಯ ವಿಭಾಗ ) ಶ್ರೇಯಾ( ಕಲಾ ವಿಭಾಗ) ರವರಿಗೆ ಎಸ್.ಡಿ.ಎಂ ಸಂಸ್ಥೆ ಮತ್ತು ಪದವಿ ಪೂರ್ವ ಕಾಲೇಜಿನ ವತಿಯಿಂದ ಮುಖ್ಯ ಅಭ್ಯಾಗತರಾಗಿದ್ದ ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್, ಶಾಲು ಹೊದಿಸಿ ಸನ್ಮಾನಿಸಿದರು.

30 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ: ಎಸ್.ಡಿ.ಎಂ ಸಂಸ್ಥೆಯ ವತಿಯಿಂದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಒಟ್ಟು 129 ವಿದ್ಯಾರ್ಥಿಗಳಿಗೆ ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಸಾಂಕೇತಿಕವಾಗಿ ವೇದಿಕೆಯಲ್ಲಿ 10 ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ವಿದ್ಯಾರ್ಥಿ ವೇತನವನ್ನು ಹಸ್ತಾಂತರಿಸಿದರು.

ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ನಗರ ಪ್ರದೇಶಗಳಲ್ಲಿ ದೊರಕುವ ಎಲ್ಲಾ ರೀತಿಯ ಅನುಕೂಲಗಳು ಮತ್ತು ವ್ಯವಸ್ಥೆಗಳು ಲಭ್ಯವಿದೆ. ಎಲ್ಲಾ ರೀತಿ ಪರೀಕ್ಷೆಗಳ ನುರಿತ ತರಬೇತಿಯು ಈ ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಪಠ್ಯ ಚಟುವಟಿಕೆಗಳು ಮಾತ್ರವಲ್ಲದೆ ಕ್ರೀಡಾ ವಿಭಾಗ ಮತ್ತು ಸಾಂಸ್ಕೃತಿಕ ವಿಭಾಗದಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ಕಳೆದ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 98.64 ಫಲಿತಾಂಶ ಲಭಿಸಿದೆ.

ಇದರ ಹೊರತಾಗಿ ಪ್ರಸಕ್ತ ಸಾಲಿನಲ್ಲಿ 40 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ, 20 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲ ಸಾಧನೆಯಿಂದ ಸಂಸ್ಥೆಯ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನವಿದೆ. ಆದ್ದರಿಂದ ಅವರ ಜನ್ಮದಿನವನ್ನು ಈ ರೀತಿಯ ವಿಶೇಷ ಕಾರ್ಯಕ್ರಮವನ್ನಾಗಿ ಪ್ರತಿ ವರ್ಷ ಆಚರಿಸುತ್ತೇವೆ. ಎಂದು ಎಸ್‌ಡಿಎಂ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಪ್ರಮೋದ್ ಕುಮಾರ್ ಬಿ. ಹೇಳಿದರು.

LEAVE A REPLY

Please enter your comment!
Please enter your name here