




ಬೆಳ್ತಂಗಡಿ: ಲಾಯಿಲ ಕಾಶಿಬೆಟ್ಟು ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಪ್ರಸನ್ನ ನರ್ಸಿಂಗ್ ಕಾಲೇಜು ಇದರ ಪ್ರಸ್ತುತ ಸಾಲಿನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟನಾ ಭಾಷಣದಲ್ಲಿ ಅವರು ಮಾತನಾಡಿದರು. ಗುರು ಶಿಷ್ಯರು, ತಂದೆ ತಾಯಿ ಮೊದಲಾದ ಸಂಬಂಧಗಳೇ ನಶಿಸಿಹೋಗಿರುವ ಸಮಾಜದಲ್ಲಿ ವೈದ್ಯರು ಮತ್ತು ದಾದಿಯರು ತಾಯಿಹೃದಯದ ಮೂಲಕ ತಮ್ಮ ಸೇವೆ ಸಲ್ಲಿಸಿ ಮತ್ತೆ ಈ ಸಂಬಂಧಗಳನ್ನು ಮತ್ತೆ ಬೆಸೆದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಣಿಯಾಗಬೇಕಾದ ಅಗತ್ಯತೆ ಇದೆ. ಶಿಕ್ಷಣ ಮತ್ತು ಆರೋಗ್ಯ ಇಂದು ಉಳ್ಳವರ ಪಾಲಾಗಿದೆ. ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೇಯ ವ್ಯಕ್ತಿ ಕೂಡ ಶಿಕ್ಷಣ ಪಡೆದು ಉತ್ತಮ ಸಮಾಜ ಕಟ್ಟುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇ ಗೌಡ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಯುರ್ವೇದ ಮತ್ತು ನರ್ಸಿಂಗ್ ಕಾಲೇಜು ಆರಂಭಿಸಲು ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೆವು. ಇಂದು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ. ಯಶಸ್ಸು ಸಾಧಿಸಲು ಎಲ್ಲರೂ ಸೇರಿ ಯುದ್ದ ಗೆಲ್ಲಬೇಕಿದೆ ಎಂದರು.


ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ ಇದರ ಪ್ರಚಾರ್ಯ ಡಾ. ಲೀಲಾಧರ ಡಿ.ವಿ ಮಾತನಾಡಿ, ಶಿಕ್ಷಕರು ಮತ್ತು ವಿದ್ಯಾರ್ಥಿ ಇಬ್ಬರೂ ಹೃದಯ ಬೆಸೆದುಕೊಂಡಲ್ಲಿ ಮಾತ್ರ ಉತ್ತಮ ಶಿಕ್ಷಣದ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದರು. ಆಳ್ವಾಸ್ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡಾ. ಯತಿ ಕುಮಾರ ಸ್ವಾಮಿ ಗೌಡ, ಚಿಕ್ಕಮಗಳೂರಿನ ಖ್ಯಾತ ದಂತ ವೈದ್ಯ ಡಾ. ಸುಂದರ ಗೌಡ, ಪ್ರಸನ್ನ ಆಯರ್ವೇದ ಕಾಲೇಜು ನಿವೃತ್ತ ವಿಭಾಗ ಮುಖ್ಯಸ್ಥ ಡಾ. ಶ್ರೀ ಕುಮಾರ್ ಶುಭ ಕೋರಿದರು.
ವೇದಿಕೆಯಲ್ಲಿ ಪ್ರಾಂಶುಪಾಲರುಗಳಾದ ಡಾ. ಫ್ಲೇವಿಯಾ ಕ್ಯಾಸ್ಟಲಿನೋ ಮತ್ತು ಡಾ. ಯತೀಶ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಪ್ರಶಾಂತ ಬಿ.ಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಸನ್ನ ಆಯುರ್ವೇದ ಆಸ್ಪತ್ರೆಯ ನಿವೃತ್ತ ವಿಭಾಗ ಮುಖ್ಯಸ್ಥ ಡಾ. ಶ್ರೀಕುಮಾರ್ ಮತ್ತು ಡಾ. ಸುಂದರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಕಿತಾ ಪ್ರಾರ್ಥನೆ ಹಾಡಿದರು. ಡಾ. ಈಶ್ವರಚಂದ್ರ ಪ್ರಮಾಣವಚನ ಬೋಧಿಸಿದರು. ಡಾ. ಮಹೇಶ್ ಪ್ರಸನ್ನ , ಡಾ. ವೃಂದಾ ಬೆಡೇಕರ್ ಮತ್ತು ಡಾ. ಶೃತಿ ಕಾರ್ಯಕ್ರಮ ನಿರೂಪಿಸಿದರು. ಗುರುನಾಥ ಪಾಟೀಲ್ ವಂದಿಸಿದರು.









