




ಧರ್ಮಸ್ಥಳ: ಚತುರ್ಧಾನ ಪರಂಪರೆಗೆ ಖ್ಯಾತಿ ಗಳಿಸಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 78ನೇ ವರ್ಷದ ಹುಟ್ಟುಹಬ್ಬ ಸಂಭ್ರಮ ನ.25ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜರುಗಲಿದೆ.
ಅಂದು ನಾಡಿನಾದ್ಯಂತ ಗಣ್ಯರು, ಡಾ.ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು, ನೌಕರರು, ಊರ-ಪರವೂರ ನಾಗರಿಕರು, ವರ್ತಕರು ಕ್ಷೇತ್ರಕ್ಕೆ ಆಗಮಿಸಿ ಡಾ.ಹೆಗ್ಗಡೆಯವರಿಗೆ ಭಕ್ತಿಪೂರ್ವಕ ಶುಭಾಶಯ, ಗೌರವ ಅಭಿನಂದನೆ ಸಲ್ಲಿಸಿದ್ದಾರೆ.


ಶ್ರೀ ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿರುವ ಚತುರ್ವಿಧ ದಾನ ಪರಂಪರೆಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿರುವ ಡಾ. ಹೆಗ್ಗಡೆಯವರು ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಪರಂಪರೆಗೆ ನವೀನ ದಿಕ್ಕನ್ನು ನೀಡಿದವರು. ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಆಯು ರ್ವೇದ, ಪ್ರಕೃತಿ ಚಿಕಿತ್ಸೆ, ಸಿರಿ ಗ್ರಾಮೋದ್ಯೋಗ, ಜನಜಾಗೃತಿ ವೇದಿಕೆ ಕಾರ್ಯಕ್ರಮ, ಆರೋಗ್ಯ ಸುರಕ್ಷಾ ಯೋಜನೆಗಳು, ಪರಿಸರ ಸಂಬಂಧಿ ಕಾರ್ಯಕ್ರಮಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳು, ರುಡ್ಸೆಟ್, ಭಜನಾ ತರಬೇತಿ ಕಮ್ಮಟ, ಯಕ್ಷಗಾನ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ವಿಪತ್ತು ನಿರ್ವಹಣಾ ತಂಡ, ಧರ್ಮೋತ್ಥಾನ ಟ್ರಸ್ಟ್, ಅನೇಕ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಇಂದು ರಾಜ್ಯಾದ್ಯಂತ ನಡೆಯುತ್ತಿದ್ದು, ಕ್ಷೇತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿ ಜನಮನ್ನಣೆಗೆ ಪಾತ್ರವಾಗಿದೆ.
ಹೆಗ್ಗಡೆಯವರ ಜನಕಲ್ಯಾಣ ಯೋಜನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಅವರ ಸಾಧನೆಗೆ ಸಂದ ಗೌರವವಾಗಿದೆ.









